ಮಡಿಕೇರಿ, ಅ. 10: ತಾ. 1.6.2014 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಗೆ ಸೇರಿದ ಹೊಸೂರು ಬೆಟ್ಟಗೇರಿ ಗ್ರಾಮದ ಹಂಚಿಕಾಡು ತೋಟ ನಿವಾಸಿ, ಅಪ್ರಾಪ್ತ ಬಾಲಕಿಯು ಟೈಲರ್ ಬಳಿ ಕೊಟ್ಟಿದ್ದ ಬಟ್ಟೆಗಳನ್ನು ತರಲು ಪಾಲಿಬೆಟ್ಟಕ್ಕೆ ಹೋಗಿ, ಬಟ್ಟೆಗಳನ್ನು ಪಡೆದುಕೊಂಡು ಹಂಚಿಕಾಡು ರಸ್ತೆಯ ಬದಿಯಲ್ಲಿರುವ ಬಸ್ ತಂಗುದಾಣ ದಲ್ಲಿ ಬಸ್‍ಗೆ ಕಾಯುತ್ತಿದ್ದಾಗ ಪಾಲಿಬೆಟ್ಟ ಬಳಿಯ ಶಾಸ್ತ್ರಿ ಹಳ್ಳಿ ಮೇಕೂರು ನಿವಾಸಿ, ಆರೋಪಿ ಎಸ್. ಸಾಯುಜ್ ಎಂಬಾತ ಆಕೆಯೊಂದಿಗೆ ನಿಮ್ಮ ಅಮ್ಮನ ಬಟ್ಟೆಗಳು ನಮ್ಮ ಮನೆಯಲ್ಲಿ ಇದೆ ಅದನ್ನು ತೆಗೆದುಕೊಂಡು ಹೋಗು ಎಂದು ಸುಳ್ಳು ಹೇಳಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋದಿದ್ದಾನೆ. ಮನೆಯ ಒಳಗಡೆ ಸೇರಿಸಿ ಎರಡೂ ಕಡೆಯ ಬಾಗಿಲನ್ನು ಭದ್ರಪಡಿಸಿ ಅತ್ಯಾಚಾರ ಎಸಗಿ, ಈ ವಿಷಯವನ್ನು ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುತ್ತೇನೆಂದು ಬೆದರಿಕೆಯನ್ನು ಸಹ ಹಾಕಿದ್ದಾನೆ. ಆ ಸಮಯದಲ್ಲಿ ಅಕ್ಕಪಕ್ಕದ ವಾಸಿಗಳು ಮನೆಯ ಬಳಿ ಬಂದಾಗ ಆರೋಪಿತನು ಬಾಗಿಲನ್ನು ತೆರೆದು ಓಡಿ ಹೋಗಿರುತ್ತಾನೆ. ನಂತರ ನೊಂದ ಬಾಲಕಿಯು ಮನೆಯೊಳ ಗಿಂದ ಹೊರಗೆ ಹೋಗಿ ತನ್ನ ಅತ್ತೆಗೆ ವಿಷಯ ತಿಳಿಸಿ, ಪೊಲೀಸ್ ಠಾಣೆಗೆ ಫಿರ್ಯಾದನ್ನು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿದ ಸಿದ್ದಾಪುರ ಪೊಲೀಸರು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿಯಲ್ಲಿ ನಡೆದು, ಆರೋಪಿ ಎಸ್. ಸಾಯುಜ್ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಬೆದರಿಕೆ ಹಾಕಿರುವದು ನಿಸ್ಸಂಶಯ ವಾಗಿ ಸಾಬೀತಾಗಿದೆ ಎಂದು ಕಂಡು ಬಂದ ಮೇರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಆರೋಪಿ ತನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ತೀರ್ಪಿನ ಮೇರೆಗೆ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕೆ ಆರೋಪಿತನಿಗೆ 5 ವರ್ಷಗಳ ಸಜೆ ಮತ್ತು ರೂ. 10,000 ದಂಡವನ್ನು ಮತ್ತು ಅಪ್ರಾಪ್ತ ವಯಸ್ಸಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ 1 ವರ್ಷ ಸಜೆ ಮತ್ತು ರೂ. 1000 ದಂಡವನ್ನು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರದ ಆರೋಪಿತನು ಆಕೆಯ ಜಾತಿಯ ಬಗ್ಗೆ ತಿಳಿದಿದ್ದೂ ಸಹ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ 5 ವರ್ಷಗಳ ಸಜೆ ಮತ್ತು ರೂ. 5,000 ದಂಡವನ್ನು, ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 3 ವರ್ಷಗಳ ಸಜೆ ಮತ್ತು ರೂ. 3,000 ದಂಡವನ್ನು ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಬಲಾತ್ಕಾರದ ಸಂಭೋಗ ನಡೆಸಿದ ಅಪರಾಧಕ್ಕಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಆರೋಪಿತನಿಗೆ 5 ವರ್ಷಗಳ ಸಜೆ ಮತ್ತು ರೂ. 5,000 ದಂಡವನ್ನು ವಿಧಿಸಿರುತ್ತಾರೆ. ಈ ಎಲ್ಲಾ ಶಿಕ್ಷೆಗಳನ್ನು ಆರೋಪಿತನು ಏಕ ಕಾಲದಲ್ಲಿ ಅನುಭವಿಸುವಂತೆಯೂ, ಪಾವತಿ ಯಾಗುವ ದಂಡದ ಹಣ 24,000ದಲ್ಲಿ ರೂ. 22,000ವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ವಾದವನ್ನು ಸರ್ಕಾರಿ ಅಭಿಯೋಜಕ ಎ.ಪಿ. ಫಿರೋಜ್‍ಖಾನ್ ಮಂಡಿಸಿರುತ್ತಾರೆ.