ಮಡಿಕೇರಿ, ಅ.10: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ವೀರಾಜಪೇಟೆ ಸಮೀಪದ ಅರಮೇರಿ ಮಠದಲ್ಲಿ ಆರಂಭಗೊಂಡಿದ್ದು, ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಶಿಬಿರದ ಪ್ರಮುಖರು ಹಾಗೂ ಮಂಗಳೂರು ವಿಭಾಗದ ಸಹವಿಭಾಗ ಪ್ರಚಾರಕ್ ಉಮೇಶ್ ಮಾತನಾಡಿ ತೆರೆದ ಮನಸ್ಸಿನಿಂದ ಮತ್ತು ಒಮ್ಮನಸಿನಿಂದ ಶಾರೀರಿಕ ಮತ್ತು ಬೌದ್ಧಿಕ ಶಿಕ್ಷಣವನ್ನು ಪಡೆದು ದೇಶ ಕಟ್ಟುವ ಕೆಲಸದಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಶಿಬಿರಾಧಿಕಾರಿ ಮಂಡಚೆಟ್ಟೀರ ನಂದ, ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ ಇದ್ದರು. ಮಹೇಶ್ ಪ್ರಾರ್ಥಿಸಿ, ಜಿಲ್ಲಾ ಕಾರ್ಯವಾಹ ಕೆ.ಕೆ.ದಿನೇಶ್ ಕುಮಾರ್ ಸ್ವಾಗತಿಸಿದರು.
ಶಿಬಿರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 131 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, 12 ಮಂದಿ ಶಿಕ್ಷಕರು ಮಾರ್ಗದರ್ಶನ ಮಾಡುತ್ತಿದ್ದಾರೆ. 25 ಮಂದಿ ಕಾರ್ಯಕರ್ತರು ಶಿಬಿರದಲ್ಲಿ ಇದ್ದಾರೆ.
ಮೊದಲನೆಯ ದಿನ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಸರಳಾಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶಿವಾಜಿ ಹಾಗೂ ಶ್ಯಾಮ್ ಪ್ರಸಾದ್ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಶಿಬಿರದಲ್ಲಿ ಬೌದ್ಧಿಕ್, ಮಹಾಪುರುಷರ ಕಥೆಗಳು, ಕವಾಯತು, ಯೋಗಾಭ್ಯಾಸ, ಧ್ಯಾನ, ಸ್ವದೇಶಿ ಆಟಗಳು, ಚರ್ಚೆ, ಸಂವಾದ ಇತ್ಯಾದಿ ಕಾರ್ಯಕ್ರಮಗಳು ಒಂದು ವಾರಗಳ ಕಾಲ ಮಠದ ಆವರಣದಲ್ಲಿ ನಡೆಯಲಿದೆ.