ಮಡಿಕೇರಿ, ಅ.11 : ಕೊಡವ ಕುಟುಂಬಗಳ ನಡುವಿನ 22 ನೇ ವರ್ಷದ ಹಾಕಿ ಉತ್ಸವ “ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿ”ಯನ್ನು ಕುಲ್ಲೇಟಿರ ಕುಟುಂಬಸ್ಥರ ನೇತೃತ್ವದಲ್ಲಿ ನಾಪೋಕ್ಲುವಿನ ಸರಕಾರಿ ಪ್ರೌಢ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮುಂದಿನ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹಾಕಿ ಉತ್ಸವ ಸಮಿತಿಯ ಅಧ್ಯಕ್ಷÀ ಕುಲ್ಲೇಟಿರ ಪಿ. ಮಂದಪ್ಪ ಶಂಭು ಹಾಗೂ ಪದಾಧಿಕಾರಿಗಳು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲ್ಲೇಟಿರ ಕುಟುಂಬದ ಹಿರಿಯರು ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಹಾಕಿ ಹಬ್ಬದ ಯಶಸ್ಸಿಗಾಗಿ ಪೂರ್ವಭಾವಿ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಬಾರಿ ಹಾಕಿ ಹಬ್ಬದಲ್ಲಿ 325ಕ್ಕೂ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ನಾಪೋಕ್ಲು ಪಟ್ಟಣದಲ್ಲಿ ಸಧ್ಯದಲ್ಲಿಯೇ ‘ಕುಲ್ಲೇಟಿರ ಕಪ್’ ಹಾಕಿ ಹಬ್ಬದ ಪ್ರಯುಕ್ತ ಸಂಪರ್ಕ ಕಚೇರಿಯನ್ನು ತೆರೆಯಲಾಗುವದು. ಅಲ್ಲದೆ, ಬ್ರೋಷರ್ ಹಾಗೂ ಲೋಗೋ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ತಾ.16 ರಂದು ಮಡಿಕೇರಿಯ ಕೊಡಗು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಮಧ್ಯಾಹ್ನ ನಡೆಸಲಾಗುವದು ಎಂದು ತಿಳಿಸಿದರು.
ಈ ಹಿಂದೆ 1998ರ ಕೋಡೀರ ಕಪ್, 1999ರ ಬಲ್ಲಚಂಡ ಕಪ್ ಹಾಗೂ 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರ ಕಪ್ ಪಂದ್ಯಾವಳಿಗಳಲ್ಲಿ ಕುಲ್ಲೇಟಿರ ಕುಟುಂಬ ವಿಜಯ ಸಾಧಿಸಿದ್ದು, 2018ರಲ್ಲಿ ನಮ್ಮದೇ ಕುಟುಂಬ ಹಾಕಿ ಹಬ್ಬವನ್ನು ನಡೆಸುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು.
ಹಾಕಿ ಉತ್ಸವಕ್ಕಾಗಿ ನಾಪೋಕ್ಲುವಿನಲ್ಲಿ ಮೂರು ಮೈದಾನಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಅಂದಾಜು ರೂ. 2 ಕೋಟಿ ವೆಚ್ಚದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಸರಕಾರದಿಂದ ಸುಮಾರು ರೂ. 50 ಲಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಸಂಸದರ ನಿಧಿಯಿಂದ ರೂ. 25 ಲಕ್ಷ ನಿರೀಕ್ಷಿಸಲಾಗಿದೆ ಮತ್ತು ದೊರೆಯುವ ವಿಶ್ವಾಸವಿದೆ. ಉಳಿದ ಹಣವನ್ನು ಪ್ರಾಯೋಜಕತ್ವ ಹಾಗೂ ದಾನಿಗಳ ಸಹಕಾರದಿಂದ ತುಂಬಲು ಚಿಂತನೆ ನಡೆಸಲಾಗಿದೆ ಎಂದು ಮಂದಪ್ಪ ಶಂಭು ಮಾಹಿತಿ ನೀಡಿದರು.
ಹಾಕಿ ಹಬ್ಬದ ಯಶಸ್ಸಿಗಾಗಿ ಕುಲ್ಲೇಟಿರ ಕುಟುಂಬಸ್ಥರ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಅಧ್ಯಕ್ಷರಾಗಿ ತಾವು, ಉಪಾಧ್ಯಕ್ಷರಾಗಿ ಪ್ರಭುಕುಮಾರ್, ಕಾರ್ಯದರ್ಶಿಯಾಗಿ ನಾಣಯ್ಯ (ಅಜಿತ್), ಸಂಚಾಲಕರಾಗಿ ಅರುಣ ಬೇಬ, ಸಲಹೆಗಾರರಾಗಿ ಉತ್ತಯ್ಯ (ಪ್ರಕಾಶ್), ಖಜಾಂಚಿಯಾಗಿ ನಾಚಪ್ಪ (ನಂದ), ಉಪ ಸಮಿತಿ ಸದಸ್ಯರುಗಳಾಗಿ ಕೆ.ಟಿ.ಚಂಗಪ್ಪ, ಕೆ.ಬಿ.ಚಿಣ್ಣಪ್ಪ, ಕೆ.ಪಿ.ಸೋಮಪ್ಪ, ಕೆ.ಎಂ.ತಮ್ಮಯ್ಯ, ಕೆ.ಎಂ.ದೇವಯ್ಯ, ಕೆ.ಎ.ಲೋಕೇಶ್, ಕೆ.ಎ.ಹೇಮ, ಕೆ.ಸಿ.ಯಶೋಧ ಹಾಗೂ ಜ್ಯೋತಿ ನಾಚಪ್ಪ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ಕುಲ್ಲೇಟಿರ ಕುಟುಂಬದ ಕುರಿತು
ನಮ್ಮ ಕುಟುಂಬದ ಕೆ.ಎಸ್.ಉತ್ತಯ್ಯ ಅವರು ಹಾಕಿ ಕ್ಷೇತ್ರದ ಸಾಧನೆಗಾಗಿ ಏಕಲವ್ಯ ಪ್ರಶಸ್ತಿ ಪಡೆದ ಮೊದಲ ಕೊಡವರಾಗಿದ್ದು, ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸುಮಾರು 12 ವರ್ಷಗಳ ಕಾಲ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿ ಅದರಲ್ಲಿ ಐದು ವರ್ಷ ತಂಡದ ನಾಯಕರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1989, 90 ಹಾಗೂ 1991 ರ ಮಧ್ಯ ಭಾರತ ತಂಡವನ್ನು ಪ್ರತಿನಿಧಿಸಿ ಹಲವು ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಕುಟುಂಬದ ಅನೇಕ ಆಟಗಾರರು ರಾಜ್ಯ ಮಟ್ಟದಲ್ಲಿ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ ಎಂದು ಪದಾಧಿಕಾರಿ ಗಳು ಹೆಮ್ಮೆ ವ್ಯಕ್ತಪಡಿಸಿದರು.
ಸೇನಾ ವಲಯಕ್ಕೂ ತಮ್ಮ ಕುಟುಂಬದ ಕಾಣಿಕೆ ಅಪಾರವಾಗಿದೆ. ಸುಮಾರು 25ಕ್ಕೂ ಅಧಿಕ ಮಂದಿ ಯೋಧರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಕುಲ್ಲೇಟಿರ ಸಿ.ಮೊಣ್ಣಪ್ಪ ಅವರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವದು ಹೆಮ್ಮೆಯ ವಿಚಾರವಾಗಿದೆ. 1987 ರಲ್ಲಿ ಮೇಜರ್ ಕೆ.ಎ.ಸೋಮಯ್ಯ ಅವರು ಶ್ರೀಲಂಕಾದಲ್ಲಿ ನಡೆದ ಐ.ಪಿ.ಕೆ.ಎಫ್ ಆಪರೇಷನ್ ಪವನ್‍ನಲ್ಲಿ ಹುತಾತ್ಮ ರಾಗಿರುತ್ತಾರೆ. 1989 ರಲ್ಲಿ ಅವರ ಸೇವೆಯನ್ನು
(ಮೊದಲ ಪುಟದಿಂದ) ಪರಿಗಣಿಸಿ ಭಾರತ ಸರಕಾರ ಸೇನಾಪದಕ ನೀಡಿ ಗೌರವಿಸಿದೆ ಎಂದು ವಿವರಿಸಿದರು.
ಪಂದ್ಯಾವಳಿಯ ಕುರಿತು ಹೆಚ್ಚಿನ ಮಾಹಿತಿಯನ್ನು 81054 96318, 94486 47343, 94486 47326 ಈ ಸಂಖ್ಯೆಗಳ ಮೂಲಕ ಪಡೆಯಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ. ಜಿ.ನಾಣಯ್ಯ (ಅಜಿತ್), ಸಂಚಾಲಕರಾದ ಕೆ. ಅರುಣ ಬೇಬ, ಖಜಾಂಚಿ ಕೆ. ಸಿ. ನಾಚಪ್ಪ (ನಂದ), ಉಪ ಸಮಿತಿ ಸದಸ್ಯರುಗಳಾದ ಕೆ. ಎಂ.ದೇವಯ್ಯ, ಕೆ.ಪಿ.ರಾಜಾ ಸೋಮಪ್ಪ ಹಾಗೂ ಕೆ ಶಾಂತಾ ಕಾಳಪ್ಪ ಉಪಸ್ಥಿತರಿದ್ದರು.