ಗೋಣಿಕೊಪ್ಪಲು, ಅ. 10: ಹಾತೂರು ಗ್ರಾ.ಪಂ. ವ್ಯಾಪ್ತಿಯ ಕೈಕೇರಿ ಗ್ರಾಮದ ಪಡಿಕಲ್ ಜಂಕ್ಷನ್ನಲ್ಲಿ ಭಾನುವಾರ ಸಂಭ್ರಮ, ಸಡಗರದೊಂದಿಗೆ ಕೈಲ್ ಮುಹೂರ್ತ ಕ್ರೀಡಾಕೂಟ ಆಚರಣೆ ಕಂಡುಬಂತು. ಯುವಕ, ಯುವತಿಯರು, ಬಾಲಕ ಬಾಲಕಿಯರು, ಪುರುಷರು, ಮಹಿಳೆಯರು, ಹಿರಿಯ ನಾಗರಿಕರು ಒಳಗೊಂಡಂತೆ ಸುಮಾರು 150ಕ್ಕೂ ಅಧಿಕ ಮಂದಿ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಬೆಳಿಗ್ಗೆ 8.30 ಗಂಟೆಗೆ ವಾಲಿಬಾಲ್ ಪಂದ್ಯಾಟದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಹಗ್ಗ-ಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಕುಡಿಕೆ ಒಡೆಯುವ ಸ್ಪರ್ಧೆ, ಲೆಮನ್ ಸ್ಪೂನ್,ಪುಟ್ಟ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ನಿಧಾನ ಬೈಸಿಕಲ್, ದ್ವಿಚಕ್ರ ವಾಹನ ರೇಸ್, ಬಾಂಬ್ ಇನ್ ದ ಸಿಟಿ ಮತ್ತು ಪುರುಷರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತಲ್ಲದೆ, ಅಂತಿಮವಾಗಿ ಪಡಿಕಲ್ ಯದು ಓಲ್ಡ್ ಬಾಯ್ಸ್ ತಂಡ ಮತ್ತು ಗೋಣಿಕೊಪ್ಪಲಿನ ಭಗತ್ ಸಿಂಗ್ ಯುವಕರ ತಂಡದ ನಡುವಿನ ರೋಚಕ ಹಗ್ಗಜಗ್ಗಾಟ ಪ್ರದರ್ಶನ ಪಂದ್ಯಾಟ ದೊಂದಿಗೆ ಕೈಲ್ ಮುಹೂರ್ತ ಕ್ರೀಡಾಕೂಟ ವರ್ಣರಂಜಿತ ಮುಕ್ತಾಯ ಕಂಡಿತು. ಇದೇ ಸಂದರ್ಭ ರಾಜ್ಯ ಕೃಷಿ ಪ್ರಶಸ್ತಿ ವಿಜೇತ, ಸಮಾಜ ಸೇವಕ ಕೈಕೇರಿ ಗ್ರಾಮದ ಜಮ್ಮಡ ಪೂವಣ್ಣ, ಪಾರಂಪರಿಕ ವೈದ್ಯೆ ಸುಮಾರು 36 ವರ್ಷಗಳಿಂದ ಪಡಿಕಲ್ ಗ್ರಾಮದಲ್ಲಿ ಕಿಡ್ನಿಸ್ಟೋನ್ ಹಾಗೂ ಕಾಮಾಲೆಗೆ ಮನೆಮದ್ದು ನೀಡುತ್ತಾ ಬಂದಿರುವ ವಲ್ಸಮ್ಮ ಜೋಸೆಫ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಗ್ರಾ.ಪಂ. ಸದಸ್ಯ ವಿ.ಪಿ. ರಾಜ, ನಿವೃತ್ತ ಆರ್ಟಿಓ ಪಡಿಕಲ್ ಚಂಗಪ್ಪ, ತಾಂತ್ರಿಕ ಸಲಹೆಗಾರ ಸಿ.ವಿ. ಸುಬ್ರಮಣಿ ಅವರನ್ನು ಗೌರವಿಸಲಾಯಿತು.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಪಡಿಕಲ್ ಯದು ಯಾದವ್ ವಹಿಸಿದ್ದು, ಕ್ರೀಡಾಕೂಟದ ಯಶಸ್ಸಿನಲ್ಲಿ ಕಾಯೆರ ಕಿರಣ್, ಕಾಯೆರ ಉಷಾ, ಪಡಿಕಲ್ ಸಂತೋಷ್, ಪಡಿಕಲ್ ಮನು, ಮಾಲಿನಿ, ಸಂದ್ಯಾ, ವಿ.ಪಿ. ರಾಜ ಹಾಗೂ ಭಾನುಕುಮಾರ್ ಮುಂತಾದವರು ಕೈಜೋಡಿಸಿದ್ದರು. ಮುಂದಿನ ವರ್ಷ ಮತ್ತಷ್ಟು ಅದ್ಧೂರಿಯಾಗಿ ಪಡಿಕಲ್ ಜಂಕ್ಷನ್ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ಆಯೋಜಿಸಲಿರುವದಾಗಿ ಪಡಿಕಲ್ ಯದು ತಿಳಿಸಿದ್ದಾರೆ.