ಸೋಮವಾರಪೇಟೆ, ಅ. 11: ವಿಯೆಟ್ನಾಂನಿಂದ ಆಮದಾಗುತ್ತಿರುವ ಕರಿಮೆಣಸಿನಿಂದಾಗಿ ಸ್ಥಳೀಯ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವರ ಗಮನಕ್ಕೆ ತರಲಾಗಿದೆ. ಕೊಂಚ ಕಾಲಾವಕಾಶ ನೀಡಿ; ಸಮಸ್ಯೆಯನ್ನು ಬಗೆಹರಿಸ್ತೀವಿ, ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಈಗಲೂ ಬದ್ಧರಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಪುನರುಚ್ಚರಿಸಿದರು.
ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಈ ಹಿಂದೆ ಅಡಿಕೆ ಮತ್ತು ರೇಷ್ಮೆ ಬೆಳೆಗಾರರೂ ಸಹ ಇದೇ ಸಮಸ್ಯೆ ಎದುರಿಸಿದ್ದರು. 1960 ಕಲಂ 72 ಪ್ರಕಾರ ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ಆಮದು ಮಾಡಿಕೊಳ್ಳುವ ಅಧಿಕಾರವಿದೆ. ಇದನ್ನೇ ಬಳಸಿ ಕಂಪೆನಿಗಳು ಶ್ರೀಲಂಕಾ ಮೂಲಕ ಕರಿಮೆಣಸು ಆಮದು ಮಾಡಿಕೊಂಡಿವೆ. ಆದರೆ ಸ್ಥಳೀಯ ಕರಿಮೆಣಸಿಗೆ ಕಲಬೆರಕೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಇಂತಹ ಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸದರು ನುಡಿದರು.
ಬ್ರೆಜಿಲ್ನಲ್ಲಿ ಆಮದು ಶುಲ್ಕ ಶೇ. 18 ರಷ್ಟಿದ್ದರೆ, ವಿಯೆಟ್ನಾಂನಲ್ಲಿ 63 ರಷ್ಟಿದೆ. ಇದೇ ಶ್ರೀಲಂಕಾ ಮಾರ್ಗದ ಮೂಲಕ ಭಾರತಕ್ಕೆ ಆಮದಾದರೆ ಕೇವಲ ಶೇ. 8 ರಷ್ಟು ತೆರಿಗೆ ವಿಧಿಸಲ್ಪಡುತ್ತದೆ. ಇದರಿಂದಾಗಿ ಅತೀ ಹೆಚ್ಚು ಕರಿಮೆಣಸು ಭಾರತ ಪ್ರವೇಶಿಸುತ್ತಿದ್ದು, ಸ್ಥಳೀಯ ಬೆಳೆಗಾರರು ಬೆಳೆದ ಕರಿಮೆಣಸಿನ ಬೆಲೆ ಕುಸಿತಗೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇನೆ ಎಂದರು.
ತಾನೂ ಸೇರಿದಂತೆ ಸ್ಥಳೀಯ ಶಾಸಕರುಗಳು ಸೇರಿ ಹಿರಿಯ ಸಂಸದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರೊಂದಿಗೆ ಶೀಘ್ರವೇ ನಿಯೋಗ ತೆರಳಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುತ್ತೇವೆ. ಈಗಾಗಲೇ ಬೆಳೆಗಾರರು ಸಂಗ್ರಹಿಸಿಟ್ಟಿರುವ ಕರಿಮೆಣಸನ್ನು ತಕ್ಷಣ ಮಾರಾಟ ಮಾಡದೇ ಕೆಲವು ಸಮಯ ಕಾಯ್ದಿಟ್ಟಿರಿ ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಕರಿಮೆಣಸಿನ ಮೇಲೆ ವಿಧಿಸುತ್ತಿರುವ ಶೇ.1.5 ಸೆಸ್ ತೆಗೆಯಬೇಕು. ಎಪಿಎಂಸಿ ಕಾಯ್ದೆಗೂ ಕೆಲವೊಂದು ತಿದ್ದುಪಡಿಗಳನ್ನು ತರಬೇಕು. ಈ ಬಗ್ಗೆಯೂ ವಾಣಿಜ್ಯ ಸಚಿವರ ಗಮನ ಸೆಳೆಯಲಾಗುವದು ಎಂದು ಸಂಸದರು ತಿಳಿಸಿದರು.