ಮೂರ್ನಾಡು, ಅ. 11 : ಕೊಯವ ಸಮಾಜದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮುಹೂರ್ತ ಸಂತೋಷ ಕೂಟ ಸಮಾರಂಭ ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ಸಿ. ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಹಿರಿಯರಾದ ಮೇಚುರ ಸೋಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನಾಂಗವನ್ನು ಒಂದೆಡೆ ಒಗ್ಗೂಡಿಸುವ ಕಾರ್ಯ ಸಮಾಜ ದಿಂದ ಆಗುತ್ತಿದೆ. ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ಎಲ್ಲರಲ್ಲೂ ಪ್ರೀತಿ ವಿಶ್ವಾಸದ ಮನೋಭಾವನೆ ಬೆಳೆಯುತ್ತಿದೆ ಎಂದು ತಿಳಿಸಿದರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ರವಿಶಂಕರ್ ನಾಣಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಸಂಪಾದನೆ ಮಾಡದಿದ್ದರೂ ಚಿಂತೆ ಇಲ್ಲ ಆದರೆ ವಿದ್ಯೆ ಎಂಬ ಆಸ್ತಿಯನ್ನು ನೀಡಬೇಕು ಎಂದರು. ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಹಾಗೂ ವೃತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಪ್ರಶಂಸನಾ ಪತ್ರವನ್ನು ಸಮಾಜದ ವತಿಯಿಂದ ನೀಡಲಾಯಿತು.

ಮಧ್ಯಾಹ್ನ ಬಳಿಕ ಕೈಲ್ ಮುಹೂರ್ತ ಸಂತೋಷ ಕೂಟ ಉಮ್ಮತ್ತಾಟ್ ನೃತ್ಯ ಪ್ರದರ್ಶನ ದೊಂದಿಗೆ ಆರಂಭಗೊಂಡಿತು. ಮಕ್ಕಳಿಗೆ ಕಾಳು ಹೆಕ್ಕುವುದು, ವಿವಿಧ ರೀತಿಯ ಓಟದ ಸ್ಪರ್ಧೆ, ಕೊಡವ ಹಾಡುಗಾರಿಕೆ, ವಾಲಗ ಕುಣಿತ, ಕೊಡವ ಗಾದೆ, ಆಶುಭಾಷಣ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಕೊಯವ ಸಮಾಜದ ಉಪಾಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಕಾರ್ಯದರ್ಶಿ ತೋರೇರ ಕಾರ್ಯಪ್ಪ, ಖಜಾಂಚಿ ಕಳ್ಳಿರ ನಾಣಯ್ಯ, ನಿರ್ದೇಶಕ ಮುಕ್ಕಾಟಿರ ಹ್ಯಾರಿ ಪೂಣಚ್ಚ, ಮಲ್ಲಂಡ ಮಹೇಶ್, ಸುಳ್ಳೇರ ಸೋಮಯ್ಯ, ಚೋಕಿರ ಡಾಲ, ಈರಮಂಡ ಯು. ವಿಜಯ, ಕಾಞಂಗಡ ಸುದೇಶ್, ಮೇಚುರ ಮಮತಾ ಲೋಕೇಶ್, ಅಚ್ಚಪಂಡ ಧರ್ಮವತಿ ಕುಶಾಲಪ್ಪ, ದೇಯಿರ ಭೀಮಯ್ಯ ಕಾಶಿ, ಸುಳ್ಳೇರ ಯಶೋಧ ಮುತ್ತಣ್ಣ ಉಪಸ್ಥಿತರಿದ್ದರು.