ಸುಂಟಿಕೊಪ್ಪ, ಅ. 10: ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳ ಬಾಲಕ ಬಾಲಕಿಯರ ಶೌಚಾಲಯವು ಗಬ್ಬೆದ್ದು ನಾರುತ್ತಿದ್ದು ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ನಾನಾ ರೀತಿಯ ರೋಗಗಳಿಗೆ ತುತ್ತಾಗುವ ಸಾಧ್ಯತೆ ಎದುರಾಗಿದೆ.
ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯು ಪಿಯುಸಿ ವರೆಗೆ ವಿದ್ಯಾರ್ಜನೆ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಸ್ವಚ್ಛತೆಯ ಅರಿವು ಮೂಡಿಸಬೇಕಾದ ಈ ವಿದ್ಯಾ ದೇಗುಲದ ಶೌಚಾಲಯ ನಿರ್ವಹಣೆಯಿಲ್ಲದೆ ಗಬ್ಬೆದ್ದು ನಾರುತ್ತಿದೆ. ಮಕ್ಕಳು ಮೂತ್ರ ವಿಸರ್ಜನೆಗೆ ತೆರಳಿದರೆ ವಾಸನೆಯಿಂದ ತಲೆ ತಿರುಗಿ ಬಿದ್ದು ಆಸ್ಪತ್ರೆಗೆ ದಾಖಲಾಗುವದರಲ್ಲಿ ಯಾವದೇ ಸಂಶಯವಿಲ್ಲ.
ಪಕ್ಕದಲ್ಲಿ ಸಂತ ಅಂತೋಣಿ ಶಾಲೆ ಹಿರಿಯ ಪ್ರಾಥಮಿಕ ಶಾಲೆ, ಸಾರ್ವಜನಿಕ ವಾಸದ ಮನೆಗಳಿದ್ದು ಗಬ್ಬೆದ್ದು ನಾರುತ್ತಿರುವ ಬಾಲಕ ಬಾಲಕಿಯರ ಶೌಚಾಲಯದಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಂಡು ಬಂದಿದೆ. ಶಾಲೆಯಲ್ಲಿ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಅಧಿಕ ಆದಾಯವಿದ್ದರೂ ಸಾರ್ವಜನಿಕ ಶೌಚಾಲಯಕ್ಕಿಂತ ಹದಗೆಟ್ಟಿರುವದು ಮಕ್ಕಳ ಪೋಷಕರಲ್ಲಿ ಆತಂಕ ಮೂಡಿದೆ.
ಇನ್ನಾದರೂ ಈ ಸಂಸ್ಥೆಯ ಮುಖ್ಯಸ್ಥರು, ಆಡಳಿತ ಮಂಡಳಿ ಇತ್ತ ಗಮನಹರಿಸಿ ಮಕ್ಕಳ ಆರೋಗ್ಯದತ್ತ ಗಮನಹರಿಸಿ ವ್ಯವಸ್ಥೆ ಕಲ್ಪಿಸಲಿ ಎಂದು ಪೋಷಕರು ಆಗ್ರಹಿಸಿದ್ದಾರೆ.