ಶನಿವಾರಸಂತೆ, ಅ. 10: ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿಯ ಆದರ್ಶ ವಿಜಯ ವಿನಾಯಕ ಯುವಕ ಸಂಘದ ವತಿಯಿಂದ ವಿಜಯ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಇತ್ತೀಚೆಗೆ ಕಾಜೂರು ಹೊಳೆಯಲ್ಲಿ ವಿಸರ್ಜಿಸಲಾಯಿತು.
ಗೌರಿ ಗಣೇಶ ಹಬ್ಬದಂದು ಸುಮಾರು 6 ಅಡಿ ಎತ್ತರವಿರುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಒಂದು ತಿಂಗಳ ಕಾಲ ಪ್ರತಿದಿನ ವಿಶೇಷ ಪೂಜೆಯನ್ನು ಗೌರಿ ಗಣೇಶ ಮೂರ್ತಿಗಳಿಗೆ ಸಲ್ಲಿಸಲಾಗುತಿತ್ತು. ವಿಸರ್ಜನೆ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಮಾರಂಭದ ಸಭೆ ಉದ್ದೇಶಿಸಿ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿದರು.
ಗ್ರಾ.ಪಂ. ಸದಸ್ಯರುಗಳಾದ ಉಷಾ, ಹೇಮಾವತಿ, ಎಸ್.ಎನ್. ಪಾಂಡು, ಹರೀಶ್, ಆದರ್ಶ ವಿಜಯ ವಿನಾಯಕ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಸಮಂಜರಿ ಕಾರ್ಯಕ್ರಮದ ನಂತರ ಗೌರಿ ಗಣೇಶನ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಿ ವಿದ್ಯುತ್ ಅಲಂಕೃತ ವಾಹನದಲ್ಲಿ ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಕೀಲು ಕುದುರೆ, ಬೊಂಬೆಯಾಟ, ಸುಗ್ಗಿ ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾಜೂರು ಹೊಳೆಯಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.