ಸೋಮವಾರಪೇಟೆ, ಅ.10 : ತಾ. 8ರ ರಾತ್ರಿ ಸೋಮವಾರಪೇಟೆಯ ಬಾರ್‍ವೊಂದರಲ್ಲಿ ನಡೆದ ಯುವಕರ ನಡುವಿನ ಘರ್ಷಣೆಗೆ ಸಂಬಂಧಿಸಿ ದಂತೆ ಕೆಲವರು ಹಿಂದೂ ಮಲೆಯಾಳಿ ಸಮುದಾಯದ ಬಗ್ಗೆ ತೇಜೋವಧೆ ಮಾಡಲು ಯತ್ನಿಸುತ್ತಿರುವದು ಖಂಡನೀಯ ಎಂದು ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಹಿಂದೂ ಮಲೆಯಾಳಿ ಸಮಾಜದ ಸಲಹೆಗಾರ ಮತ್ತು ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ತಾ. 8ರ ರಾತ್ರಿ ಬಾರ್‍ನಲ್ಲಿ ವೈಯುಕ್ತಿಕ ವಿಷಯಕ್ಕೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಕೆಲವರು ಪೊಲೀಸ್ ಠಾಣೆಗೆ ತಪ್ಪು ಮಾಹಿತಿ ನೀಡಿ, ಹಿಂದೂ ಮಲೆಯಾಳಿ ಸಮಾಜ ಹಾಗೂ ಸಮುದಾಯದ ವಿರುದ್ಧ ತೇಜೋವಧೆಗೆ ಯತ್ನಿಸಿರುವದು ಖಂಡನೀಯ ಎಂದರು.
ತಾಲೂಕು ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಸೋಮವಾರ ಪೇಟೆಯಲ್ಲಿ ಓಣಂ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದೇವೆ. ಮೆರವಣಿಗೆ ಸಂದರ್ಭವೂ ಸಹ ಯಾರಿಗೂ ತೊಂದರೆ ನೀಡಿಲ್ಲ. ಕಾರ್ಯಕ್ರಮಕ್ಕೆ ಎಲ್ಲಾ ಜನಾಂಗ ಹಾಗೂ ರಾಜಕೀಯ ಪಕ್ಷಗಳ ಮುಖಂಡರೂ ಆಗಮಿಸಿ ದ್ದರು. ಯಾವ ಜನಾಂಗವನ್ನೂ ನಿಂದಿಸಿಲ್ಲ. ಶಾಂತಿ ಸೌಹಾರ್ದತೆಯ ಸಂದೇಶ ಸಾರಿದ್ದೇವೆ. ಆದರೆ ಕೆಲವೊಂದು ಸಂಘಟನೆಯವರು ಪೊಲೀಸರಿಗೆ ನೀಡಿದ ಮನವಿಯಲ್ಲಿ ಸಮಾಜಘಾತುಕ ಶಕ್ತಿಗಳು ಎಂದು ಉಲ್ಲೇಖಿಸಿದ್ದಾರೆ. ಸಮಾಜಘಾತುಕ ಶಕ್ತಿಗಳು ಯಾರು ಎಂಬದನ್ನು ಸ್ಪಷ್ಟಪಡಿಸಲಿ. ಈ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ವಿ.ಎಂ. ವಿಜಯ ಒತ್ತಾಯಿಸಿದರು.
ನಮ್ಮ ಕಾರ್ಯಕ್ರಮ ಸಂಜೆ 7 ಗಂಟೆಗೆ ಮುಕ್ತಾಯಗೊಂಡಿದೆ. ರಾತ್ರಿ 11 ಗಂಟೆಗೆ ಬಾರಿನಲ್ಲಿ ಗಲಾಟೆ ಸಂಭವಿಸಿದರೆ ಸಂಘಟನೆಯನ್ನು ಎಳೆಯೋದು ಯಾಕೆ? ಆರೋಪ ಮಾಡುವವರು ಸಮಾಜಕ್ಕೆ ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಸಮಾಜದ ಸಂಘಟನಾ ಕಾರ್ಯ ದರ್ಶಿ ಗಂಗಾಧರ್ ಮಾತನಾಡಿ, ಮಲೆಯಾಳಿ ಸಮುದಾಯದ ಸಂಸ್ಕøತಿ ಆಚಾರ ವಿಚಾರಗಳನ್ನು ಬಿಂಬಿಸುವ ಸಲುವಾಗಿ 2ನೇ ವರ್ಷವೂ ಓಣಂ ಆಚರಣೆ ಮಾಡಲಾಗಿದೆ. ದೇಶಪ್ರೇಮದಲ್ಲಿ ಮಲೆಯಾಳಿಗಳು ಮುಂಚೂಣಿ ಯಲ್ಲಿದ್ದಾರೆ. ವೈಯುಕ್ತಿಕ ವಿಚಾರಗಳಿಗೆ ಹೊಡೆದಾಡಿಕೊಂಡರೆ ಇಡೀ ಸಮುದಾಯದ ವಿರುದ್ಧ ಆರೋಪ ಮಾಡುವದು ಸರಿಯಲ್ಲ. ಇಂತಹ ಆರೋಪ ಮಾಡುವವರು ಮೊದಲು ತಮ್ಮ ಹಿನ್ನೆಲೆಯನ್ನು ನೋಡಿಕೊಳ್ಳಲಿ. ಸಮುದಾಯದ ಏಳಿಗೆ ಸಹಿಸದ ಮನಸ್ಥಿತಿಯವರು ಜಾತಿಗಳ ನಡುವೆ ವಿಷಬೀಜ ಬಿತ್ತಲು ಯತ್ನಿಸುತ್ತಿದ್ದು, ಈ ಬಗ್ಗೆ ಎಲ್ಲಾ ಜಾತಿ ಜನಾಂಗದವರೂ ಜಾಗೃತರಾಗಬೇಕು ಎಂದರು.
ಗೋಷ್ಠಿಯಲ್ಲಿ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್, ಕಾರ್ಯದರ್ಶಿ ಅಯ್ಯಪ್ಪ, ಸಲಹೆಗಾರ ಐಗೂರು ಪ್ರಭಾಕರ್ ಉಪಸ್ಥಿತರಿದ್ದರು.