ಕುಶಾಲನಗರ, ಅ. 11: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ಬೇಡಿಕೆಯ ಹಕ್ಕೊತ್ತಾಯವನ್ನು ಸರಕಾರದ ಗಮನಕ್ಕೆ ತರುವ ಸಲುವಾಗಿ ಕುಶಾಲನಗರದಲ್ಲಿ ತಾ. 30 ರಂದು ಬೃಹತ್ ರ್ಯಾಲಿ ಆಯೋಜಿಸಲು ನಿರ್ಣಯ ಕೈಗೊಳ್ಳಲಾಗಿದೆ. ಸ್ಥಳೀಯ ಹೊಟೇಲ್ ಕನ್ನಿಕಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆದ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೇಂದ್ರ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲಾಗಿದೆ.ನೂತನ ತಾಲೂಕು ರಚನೆಗೆ ಸಂಬಂಧಿಸಿದಂತೆ ಸಾಧ್ಯವಿರುವ ಎಲ್ಲಾ ಹೋರಾಟ ಮಾರ್ಗಗಳನ್ನು ವಿಸ್ತøತವಾಗಿ ಚರ್ಚಿಸಿ ತಾ.30ರ ರ್ಯಾಲಿ ನಿರ್ಣಯವನ್ನು ಪ್ರಮುಖವಾಗಿ ತೆಗೆದುಕೊಳ್ಳಲು ಸಭೆ ಒಮ್ಮತದ ನಿರ್ಣಯ ಕೈಗೊಂಡಿದೆ. ಸರ್ಕಾರದ ಜೊತೆ ಈ ಬಗ್ಗೆ ಚರ್ಚಿಸಲು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ನೇತೃತ್ವದಲ್ಲಿ ನಿಯೋಗ ತೆರಳುವದು, ಸಮಿತಿಯ 19 ಸ್ಥಾನೀಯ ಸಮಿತಿಗಳ ವ್ಯಾಪ್ತಿಯಲ್ಲೂ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ಚಳವಳಿ ಆರಂಭವಾಗಲಿದೆ. ರ್ಯಾಲಿಗೆ ಸಂಬಂಧಿಸಿದಂತೆ ಸ್ಥಾನೀಯ ಸಮಿತಿಗಳ ವ್ಯಾಪ್ತಿಯಲ್ಲೂ ಜಾಗೃತಿ ಸಭೆಗಳನ್ನು ಆಯೋಜಿಸಲಾಗುವದು. ಪ್ರತೀ ಮನೆಯಿಂದಲೂ ತಲಾ ಒಬ್ಬರು ರ್ಯಾಲಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ತಾ. 30ರಂದು ನಡೆಯಲಿರುವ ಬೃಹತ್ ರ್ಯಾಲಿ ತಾಲೂಕು ಹೋರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಮೈಲಿಗಲ್ಲು ಆಗಲಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ತಿಳಿಸಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ರ್ಯಾಲಿ ನಡೆಯುವ ದಿನ ಆಹ್ವಾನಿಸಲಾಗುವದು. ಕಾರು ನಿಲ್ದಾಣದಲ್ಲಿ ನಡೆಯಲಿರುವ ಬಹಿರಂಗ ಸಭೆಯಲ್ಲಿ ತಾಲೂಕು ಘೋಷಣೆಯ ಅಗತ್ಯತೆ ಮನವರಿಕೆ ಮಾಡಿಕೊಟ್ಟು ಹೋರಾಟಕ್ಕೆ ಜನಪ್ರತಿನಿಧಿಗಳ ಸಹಕಾರವನ್ನೂ ತೆಗೆದುಕೊಳ್ಳಲಾಗುವದು. ರ್ಯಾಲಿ ನಂತರ ಅಗತ್ಯ ಬಿದ್ದರೆ ಮುಂದೆ ಪ್ರಸ್ತಾವಿತ ತಾಲೂಕಿನ ವ್ಯಾಪ್ತಿಯಲ್ಲಿ ಬಂದ್ ನಡೆಸುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.