ಸೋಮವಾರಪೇಟೆ, ಅ. 10: ತಾಲೂಕು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಕೆಲವರು ಶನಿವಾರಸಂತೆ ನಾಡಕಚೇರಿ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪ ದುರುದ್ದೇಶದಿಂದ ಕೂಡಿದೆ. ಈ ನಾಡ ಕಚೇರಿ ವ್ಯಾಪ್ತಿಗೆ ಒಳಪಡದೇ ಇರುವ ವ್ಯಕ್ತಿಗಳು ಸುಖಾಸುಮ್ಮನೆ ಆರೋಪ ಮಾಡಿದ್ದಾರೆ ಎಂದು ದಸಂಸ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಡಿ.ಜೆ. ಈರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಲ್ಲಿನ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶನಿವಾರಸಂತೆ ನಾಡಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಹಶೀಲ್ದಾರ್ ಎದುರು ಆರೋಪಿಸಿರುವ ಡಿ.ಎಸ್. ನಿರ್ವಾಣಪ್ಪ ಮತ್ತು ಜಯಮ್ಮ ಅವರು ಶನಿವಾರಸಂತೆ ನಾಡ ಕಚೇರಿಗೆ ಒಳಪಡುವದಿಲ್ಲ. ಆದರೂ ಆರೋಪ ಮಾಡುತ್ತಿರುವದು ಸಂಶಯಕ್ಕೆ ಎಡೆ ಮಾಡಿದೆ ಎಂದು ಈರಪ್ಪ ಆರೋಪಿಸಿದರು.

ಕಳೆದ ಮಾರ್ಚ್‍ನಲ್ಲಿ ಶನಿವಾರ ಸಂತೆಯಲ್ಲಿ ಇವರುಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕರೇ ವಿರೋಧ ವ್ಯಕ್ತಪಡಿಸಿದರು. ವಿಧವೆ ಮಹಿಳೆಯೋರ್ವರು ಹಣ ಪಡೆದ ಆರೋಪ ಮಾಡಿದಾಗ ಸ್ಥಳದಿಂದ ಕಾಲ್ಕಿತ್ತಿದ್ದರು. ಶನಿವಾರಸಂತೆ ನಾಡಕಚೇರಿಯಲ್ಲಿ 7 ಮಂದಿ ದಲಿತ ಅಧಿಕಾರಿಗಳೇ ಕೆಲಸ ಮಾಡುತ್ತಿದ್ದು, ಇವರುಗಳ ವಿರುದ್ಧವೇ ಆರೋಪ ಮಾಡುವ ಮೂಲಕ ದಲಿತರ ಮೇಲೆಯೇ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ಈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆಗಳ ಹೆಸರಿನಲ್ಲಿ ವೃಥಾ ಆರೋಪ ಮಾಡುತ್ತಿರುವ ನಿರ್ವಾಣಪ್ಪ ಅವರ ಆದಾಯದ ಮೂಲ ಯಾವದು? ಎಂಬದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ತೆ ಹಚ್ಚಲಿ. ಈ ಬಗ್ಗೆ ಎಸ್.ಪಿ. ಅವರಿಗೂ ದೂರು ನೀಡಲಾಗುವದು. ಇವರುಗಳ ಕಿರುಕುಳದಿಂದ ಶನಿವಾರಸಂತೆ ನಾಡಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳೂ ವಿಳಂಬ ವಾಗುತ್ತಿದೆ ಎಂದು ಈರಪ್ಪ ಆರೋಪಿಸಿದರು.

ಡಿ.ಎಸ್. ನಿರ್ವಾಣಪ್ಪ ಅವರು ಸೋಮವಾರಪೇಟೆ ಹೋಬಳಿ ಮತ್ತು ಜಯಮ್ಮ ಅವರು ಕೊಡ್ಲಿಪೇಟೆ ಹೋಬಳಿಗೆ ಒಳಪಟ್ಟಿದ್ದರೂ ಸಹ ಶನಿವಾರಸಂತೆ ನಾಡ ಕಚೇರಿ ವಿರುದ್ಧ ಆರೋಪ ಮಾಡುತ್ತಿರುವದು ಯಾಕೆ? ಇವರುಗಳ ವೈಯುಕ್ತಿಕ ಕೆಲಸ ಆಗದೇ ಇದ್ದ ಸಂದರ್ಭ ಇಂತಹ ವೃಥಾ ಆರೋಪಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದೇ ಆದಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಕೊಡಲಿ. ಸೂಕ್ತ ದಾಖಲೆಗ ಳೊಂದಿಗೆ ಹೋರಾಟಕ್ಕೆ ಇಳಿದರೆ ನಮ್ಮ ಸಂಘಟನೆಯೂ ಕೈಜೋಡಿಸಲಿದೆ ಎಂದು ಗೋಷ್ಠಿಯಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಯುವ ಘಟಕಾಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹೇಳಿದರು.

ಗೋಷ್ಠಿಯಲ್ಲಿ ಕರವೇ ಶನಿವಾರಸಂತೆ ಹೋಬಳಿ ಅಧ್ಯಕ್ಷ ಎನ್.ಡಿ. ಆನಂದ, ರಾಮೇನಹಳ್ಳಿ ಗ್ರಾಮಾಧ್ಯಕ್ಷ ಪ್ರವೀಣ್ ಕುಮಾರ್, ಮೆಣಸ ಗ್ರಾಮದ ರಂಗಶೆಟ್ಟಿ, ಮಹೇಶ್, ಶನಿವಾರಸಂತೆಯ ವೀರಭದ್ರ ಉಪಸ್ಥಿತರಿದ್ದರು.