ಮಡಿಕೇರಿ ಅ. 11: ಹೊರ ರಾಜ್ಯದಿಂದ ಕೊಡಗು ಜಿಲ್ಲೆಯನ್ನು ಪ್ರವೇಶಿಸುತ್ತಿರುವ ವಾಹನಗಳು ಸಾರಿಗೆ ನಿಯಮವನ್ನು ಉಲ್ಲಂಘಿ ಸುತ್ತಿರುವದರಿಂದ ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರು ಮತ್ತು ಚಾಲಕರು ಅನೇಕ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಆರೋಪಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಳಿ ಬಣ್ಣದ ಸಂಖ್ಯಾ ಫಲಕÀ ಹೊಂದಿರುವ ವಾಹನಗಳು ಕೂಡ ಸಾರಿಗೆ ನಿಯಮವನ್ನು ಉಲ್ಲಂಘಿ ಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರಿಕೆ, ಪೆರಂಬಾಡಿ, ಕುಟ್ಟ ಸೇರಿದಂತೆ ಕೊಡಗಿನ ಗಡಿಭಾಗಗಳಲ್ಲಿ ಸಾರಿಗೆ ಇಲಾಖೆ ತನಿಖಾ ಕೇಂದ್ರ ತೆರೆಯಬೇಕು, ಹೊರ ರಾಜ್ಯದಿಂದ ಬರುವ ವಾಹನಗಳನ್ನು ತಪಾಸಣೆಗೆ ಒಳಪಡಿಸಬೇಕು, ರೂ. 300 ಪಾವತಿಸಿ ಅನುಮತಿ ಪಡೆದು ಬರುವ ಹೊರ ರಾಜ್ಯದ ವಾಹನಗಳು ಕೊಡಗು ಜಿಲ್ಲೆಯಲ್ಲಿ ರಾಜಾರೋಷವಾಗಿ ಬಂದು, ಹೋಗುತ್ತಿರುವ ಬಗ್ಗೆ ಗಮನಹರಿಸಬೇಕು, ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಬಿಳಿ ಬಣ್ಣದ ಸಂಖ್ಯಾ ಫಲಕ ಹೊಂದಿರುವ ವಾಹನಗಳು ಟ್ಯಾಕ್ಸಿಗಳಾಗಿ ಸಂಚರಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳ ಬೇಕು. ಹೋಂಸ್ಟೆಗಳಲ್ಲಿ ಹಾಗೂ ಹೊಟೇಲ್‍ಗಳಲ್ಲಿ ಅನಧಿಕೃತವಾಗಿ ಬಿಳಿ ಬಣ್ಣದ ಸಂಖ್ಯಾ ಫಲಕದ ವಾಹನಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿರುವದರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿ ವರ್ಷ ಟ್ಯಾಕ್ಸಿ ವಾಹನಗಳಿಗೆ ವಿಮೆಯನ್ನು ಅಧಿಕಗೊಳಿಸಲಾಗುತ್ತಿದೆ. ದಸರಾ ಹಬ್ಬದ ಸಮಯದಲ್ಲಿ ಹೊರ ರಾಜ್ಯದಿಂದ ಬರುವ ಹಳದಿ ಬೋರ್ಡ್ ವಾಹನಗಳಿಗೆ ಒಂದು ತಿಂಗಳ ಅವಧಿಗೆ ಯಾವದೇ ತೆರಿಗೆಯನ್ನು ವಿಧಿಸುವದಿಲ್ಲ. ಇದು ಕರ್ನಾಟಕ ರಾಜ್ಯದ ದಸರಾ ಕೊಡುಗೆಯಾಗಿದೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯದ ಹಳದಿ ಬೋರ್ಡ್ ವಾಹನಗಳಿಗೆ ಕೂಡ ಶಬರಿಮಲೆ ಯಾತ್ರೆಯ ಸಮಯದಲ್ಲಿ ಯಾವದೇ ತೆರಿಗೆಯನ್ನು ವಿಧಿಸದೆ ಕೇರಳ ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಬಿಳಿ ಬಣ್ಣದ ಸಂಖ್ಯಾ ಫಲಕದ ವಾಹನವನ್ನು ಟ್ಯಾಕ್ಸಿ ರೂಪದಲ್ಲಿ ಕಾನೂನು ಬಾಹಿರವಾಗಿ ಬಳಸುತ್ತಿರುವ ಬಗ್ಗೆ ಸಚಿವರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ಸಾರಿಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಸ್ಪಂದನೆ ದೊರೆತ್ತಿಲ್ಲವೆಂದು ಸಂಪತ್ ಕುಮಾರ್ ಆರೋಪಿಸಿದರು.

ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ರಫೀಕ್ ಮಾತನಾಡಿ, ಭಾಗಮಂಡಲದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವದ ರಿಂದ ಚಾಲಕರು ಹರಸಾಹಸ ಪಡುವಂತಾಗಿದೆ. ಮಳೆಗಾಲಕ್ಕೂ ಮೊದಲೆ ರಸ್ತೆ ದುರಸ್ತಿ ಪಡಿಸಬೇಕಾಗಿದ್ದ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಪರಿಣಾಮ ಇಂದು ಚಾಲಕರು ಕಷ್ಟ ಅನುಭವಿಸುವಂತ್ತಾಗಿದೆ ಎಂದು ಟೀಕಿಸಿದರು. ನಿಗದಿತ ಸಮಯದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಭಾಗಮಂಡಲ ರಸ್ತೆತಡೆ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಂಘದ ಖಜಾಂಚಿ ವಸಂತ, ಪ್ರಧಾನ ಕಾರ್ಯದರ್ಶಿ ಬಿ.ಸಿ. ರಾಜು, ಸಹ ಕಾರ್ಯದರ್ಶಿ ಉಮೇಶ್ ಹಾಗೂ ಸದಸ್ಯ ರಶೀದ್ ಉಪಸ್ಥಿತರಿದ್ದರು.