ಗೋಣಿಕೊಪ್ಪಲು, ಅ. 11 : ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ಸ್ಥಾಪಿಸಿರುವ ಫೀ. ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಭೂಸೇನಾ ಮುಖ್ಯಸ್ಥರಿಂದ ಅನಾವರಣಗೊಳಿಸಲು ಸೇನೆಯ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಯಿತು.
ಭಾರತೀಯ ಸೇನೆ ಹಾಗೂ ಫೀ. ಮಾ. ಕೆ ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ನಿರ್ಮಿಸಿರುವ ಪ್ರತಿಮೆಯನ್ನು ನವೆಂಬರ್ ತಿಂಗಳಿನಲ್ಲಿ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಉದ್ಘಾಟಿಸಲಿರುವದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಿ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.
ಎಂಇಜಿ ಸಬ್ ಏರಿಯಾ ಕಮಾಂಡರ್ ಮೇಜರ್ ಜನರಲ್ ಕೆ. ಎಸ್. ನಿಜ್ಜಾರ್, ಎಂಇಜಿ ಸೆಂಟರ್ ಬ್ರಿಗೇಡಿಯರ್ ಸಚ್ಚಿದೇವ್, ಬ್ರಿಗೇಡಿಯರ್ ಸಲೀಂ ಇವರುಗಳ ತಂಡ ಭೇಟಿ ನೀಡಿದರು. ನವೆಂಬರ್ ತಿಂಗಳಿನಲ್ಲಿ ಅನಾವರಣಗೊಳಿಸುವ ಬಗ್ಗೆ ಚರ್ಚಿಸಿ, ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಫೋರಂ ಸಂಚಾಲಕ ನಿ. ಮೇಜರ್ ನಂದಾ ಮಾತನಾಡಿ, ಪ್ರತಿಮೆಯೊಂದಿಗೆ ಯುವಪೀಳಿಗೆಗೆ ಸೇನೆಯ ಬಗ್ಗೆ ಸ್ಫೂರ್ತಿ ನೀಡಲು ಕೆಲವೊಂದು ಯೋಜನೆಗಳನ್ನು ರೂಪಿಸಬೇಕು. ಪ್ರತಿಮೆಯ ಸಮೀಪ ಯುದ್ದ ಟ್ಯಾಂಕರ್ ನಿರ್ಮಾಣ, ಲಘು ವಿಮಾನ ಹಾಗೂ ಆರ್ಟಿಲರಿ ಗನ್ಸ್ ಇಡಬೇಕು. ಇದರಿಂದ ಯುವ ಸಮೂಹವನ್ನು ಸೇನೆಗೆ ಸೇರಿಸಲು ಉತ್ತೇಜನ ನೀಡಲು ಸಹಕಾರಿಯಾಗು ತ್ತದೆ ಎಂದರು. ಈ ಸಂದರ್ಭ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಉಪಸ್ಥಿತರಿದ್ದರು.