ಕರಿಕೆ-ಭಾಗಮಂಡಲ, ಅ. 11: ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದ ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಜನಜಾಗೃತಿ ಮೂಡಿಸುವ ಹಾಗೂ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಕರಿಕೆ, ಭಾಗಮಂಡಲ, ಚೆಟ್ಟಿಮಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು.
ಕರಿಕೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅದ್ಯಕ್ಷ ಹೊಸಮನೆ ಹರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಒಂದು ಕಾಲದಲ್ಲಿ ಅಮೇರಿಕಾ ಭೇಟಿಗೆ ವೀಸಾ ನೀಡಲು ನಿರಾಕರಿಸಿದ ಒಬಮಾ ನರೇಂದ್ರ ಮೋದಿ ಪ್ರಧಾನಿಯಾದ ಕೂಡಲೇ ಅಮೇರಿಕಾಕ್ಕೆ ಕರೆದು ಸ್ವಾಗತಿಸಿದರು. ಅಲ್ಲದೆ ಭಾರತ-ಚೀನಾ ಗಡಿಯಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ಪ್ರಧಾನಿ ದಿಟ್ಟತನದಿಂದ ಎದುರಿಸಿ ಚಾಣಾಕ್ಷತನ ಮೆರೆದರು ಎಂದರು. ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಎದುರುತ್ತರವಾಗಿ ಸರ್ಜಿಕಲ್ ಧಾಳಿ ನಡೆಸಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು. ಆದರೆ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದ್ದು ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಪರೋಕ್ಷ ಕಾರಣವಾಗಿದ್ದು, ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಕೇಸ್ನಲ್ಲಿ ಸಚಿವ ಜಾರ್ಜ್ ಹೆಸರು ಕೇಳಿ ಬಂದರೂ ಸರಕಾರ ಕ್ಲಿನ್ ಚೀಟ್ ನೀಡಿ ಸಚಿವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ವಿಸ್ತಾರಕ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮದ ಫಲವಾಗಿ ಉತ್ತರ ಪ್ರದೇಶ ಹಾಗೂ ಮಣಿಪುರಿ ರಾಜ್ಯಗಳಲ್ಲಿ ಬಿ.ಜೆ.ಪಿ ಜಯಗಳಿಸಿ ಇತಿಹಾಸ ಸೃಷ್ಠಿಸಿದ್ದು ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಭಾಜಪವನ್ನು ಅಧಿಕಾರಕ್ಕೆ ತರಲು ಪಣತೊಡಬೇಕೆಂದರು. ಅಲ್ಲದೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಿರುಕುಳದ ಬಗ್ಗೆಯೂ ಹರಿಹಾಯ್ದ ಶಾಸಕರು ಜನರಿಗೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಲಾಗು ವದೆಂದರು. ಪಾಣತ್ತೂರು-ಕರಿಕೆ ರಾಷ್ಟ್ರೀಯ ಹೆದ್ದಾರಿಯನ್ನು ಯಾವದೇ ಸಮಸ್ಯೆ ಎದುರಿಸಿ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದರು. ಕೇಂದ್ರ ಸರ್ಕಾರದ ಮುದ್ರ ಯೋಜನೆ, ಜೀವನ್ ಜ್ಯೋತಿ, ಅಟಲ್ ಪಿಂಚಣಿ, ರಾಷ್ಟ್ರೀಯ ಭದ್ರತಾ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಹಳ್ಳಿಯಿಂದ ದಿಲ್ಲಿಯ ತನಕವೂ ಉತ್ತಮ ಜನಾಭಿಪ್ರಾಯವಿದ್ದು ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದ್ದು ಇದನ್ನು ಮಟ್ಟಹಾಕಲು ಸರಕಾರ ಹವಣಿಸುತ್ತಿದ್ದು ಇದರ ಒಂದು ಭಾಗವೇ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸರಣಿ ಹತ್ಯೆಗಳು ಎಂದು ಆರೋಪಿಸಿದರು.
ಏಳೆಂಟು ತಿಂಗಳಲ್ಲಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನತೆ ತಕ್ಕ ಪಾಠವನ್ನು ಕಲಿಸಲಿದ್ದಾರೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಇವತ್ತಿನಿಂದಲೇ ಪಣತೊಡಬೇಕೆಂದರು. ಜಿ.ಪಂ. ಅಧ್ಯಕ್ಷ ಹರೀಶ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಪ್ರಮುಖರಾದ ಬಾಲಚಂದ್ರ ಕಳಗಿ, ತಳೂರು ಕಿಶೋರ್ಕುಮಾರ, ಐಸಾಕ್, ಕೋಡಿರ ಪ್ರಸನ್ನ, ಕಾಳನ ರವಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಕಾಂಗ್ರೆಸ್ ಇತರ ಪಕ್ಷದ ಕಾರ್ಯಕರ್ತರಾದ ವೇಣುಗೋಪಾಲ, ಶೋಭರಾಜ, ರಾಘವ. ಚೆಟ್ಟಿಮಾನಿಯಲ್ಲಿ ನಡೆದ ಸಭೆಯಲ್ಲಿ ಕೆದಂಬಾಡಿ ಕೀರ್ತಿಕುಮಾರ್, ಕೆದಂಬಾಡಿ ಪ್ರಸನ್ನ ಮೊದಲಾದವರು ಬಿಜೆಪಿಗೆ ಸೇರ್ಪಡೆಗೊಂಡರು.
_ ಸುಧೀರ್ ಹೊದ್ದೆಟ್ಟಿ