ಗೋಣಿಕೊಪ್ಪಲು, ಅ. 11: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ಕಾಡಾನೆ ಉಪಟಳ ನಿರಂತರವಾಗಿರುವದಾಗಿ ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ಹಲವು ರೈತರು ಕಾಫಿ, ಅಡಿಕೆ, ತೆಂಗು, ಬಾಳೆ ಹಾಗೂ ಭತ್ತದ ಪೈರುಗಳಲ್ಲಿ ಒಡಿಕಟ್ಟುವ ಸಂದರ್ಭವೇ ಕಾಡಾನೆಗಳ ಹಿಂಡು ನುಸುಳಿ ಲಕ್ಷಾಂತರ ಮೌಲ್ಯದ ಫಸಲು ನಾಶ ಮಾಡುತ್ತಿರುವದಾಗಿ ಆರೋಪಿಸಿದ್ದಾರೆ.

ಕಳತ್ಮಾಡು, ಗೊಟ್ಟಡ, ಪಡಿಕಲ್ ಹಾಗೂ ಕೈಕೇರಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ನಡುವೆಯೂ ರೈತರು ಕೃಷಿ ಚಟುವಟಿಕೆ ಹಮ್ಮಿಕೊಂಡಿದ್ದರು. ಇದೀಗ ಭತ್ತ ಪೈರು ಕಟ್ಟುತ್ತಿರುವಾಗಲೇ ಆನೆಗಳ ಕಾಟ ಮೇರೆ ಮೀರಿದೆ.

ಸುಮಾರು 7-8 ಆನೆಗಳ ಹಿಂಡು ಕಳತ್ಮಾಡುವಿನಲ್ಲಿ ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಗೆ ಬೇರೆಡೆ ಸಾಗಿಸಲು ಸಾಧ್ಯವಾಗಿಲ್ಲ ಎಂದು ಈ ಭಾಗದ ಕೃಷಿಕರಾದ ಬಾರಿಕೆ ದೇವಯ್ಯ, ಪಡಿಕಲ್ ಮಣಿ, ಮನು, ಬಾಲಕೃಷ್ಣ, ಭಾನುಕುಮಾರ್, ವಿ.ಪಿ. ರಾಜ, ಶಿವರಾಮ್, ಪಡಿಕಲ್ ಯದು ಮುಂತಾದವರು ಆರೋಪಿಸಿದ್ದಾರೆ.

ಮುಟ್ಲುವಿನಲ್ಲಿ: ಮುಟ್ಲು ಗ್ರಾಮದಲ್ಲಿ ಕಾಡಾನೆಗಳ ಉಪಟಳ ಕುರಿತು ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಹೇಳಿಕೆ ನೀಡಿ, ಚಿಲ್ಲಜಮ್ಮಂಡ ಕುಟುಂಬದ ಗದ್ದೆಗಳಿಗೆ ಧಾಳಿ ನಡೆಸಿರುವ ಕಾಡಾನೆಗಳು ಬೊಟ್ಟೋಳಂಡ ಹಾಗೂ ಪುದಿಯತ್ತಂಡ ಕುಟುಂಬಸ್ಥರ ಭತ್ತದ ಗದ್ದೆಗಳಲ್ಲಿಯೂ ಹಾನಿಗೊಳಿಸಿವೆ ಎಂದು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಖುದ್ದು ಪರಿಶೀಲಿಸಿ, ಗ್ರಾಮಸ್ಥರಿಗೆ ನಷ್ಟ ಪರಿಹಾರ ಕಲ್ಪಿಸುವದರೊಂದಿಗೆ ಕಾಡಾನೆಗಳನ್ನು ಹಿಮ್ಮೆಟ್ಟಿಸುವಂತೆ ಆಗ್ರಹಿಸಿದ್ದಾರೆ.