ಮಡಿಕೇರಿ, ಅ. 11: ಗರ್ಭಿಣಿಯರು ಹಾಗೂ ಬಾಣಂತಿ ಯರಿಗೆ ಪೌಷ್ಟಿಕ ಆಹಾರದೊಂದಿಗೆ ಔಷಧಿಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆಗೆ ಬಹುತೇಕ ಕಡೆಗಳಲ್ಲಿ ಸ್ಪಂದನ ಸಿಗುತ್ತಿದ್ದು, ಸಂಪಾಜೆ, ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಸ್ಪಂದನ ನೀರಸವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವಂತೆ ಮಡಿಕೇರಿ ತಾ.ಪಂ. ಕೆ.ಡಿ.ಪಿ. ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಶು ಇಲಾಖೆಯ ಕಾರ್ಯಪ್ರಗತಿ ಪರಿಶೀಲನೆ ವೇಳೆ ಸಹಾಯಕ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಉಳಿದೆಲ್ಲ ಕಡೆಗಳಲ್ಲಿ ಯೋಜನೆಗೆ ಉತ್ತಮ ಸ್ಪಂದನ ದೊರಕುತ್ತಿದೆ. ಗರ್ಭಿಣಿಯರು ಬಾಣಂತಿಯರು ಅಂಗನವಾಡಿಗಳಿಗೆ ಹಾಜರಾಗಿ ಸೌಲಭ್ಯ ಪಡೆದು ಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೊಂಚ ಕಷ್ಟವಾಗುತ್ತಿದೆ. ಅದರಲ್ಲೂ ಸಂಪಾಜೆ ಹಾಗೂ ಪೆರಾಜೆ ಗ್ರಾಮದಲ್ಲಿ ಮಾತ್ರ ಹಿನ್ನಡೆಯಾಗಿದೆ. ರಸ್ತೆಗಳಿಲ್ಲದೆ,
(ಮೊದಲ ಪುಟದಿಂದ) ವಾಹನ ಸೌಕರ್ಯಗಳಿಲ್ಲದೆ ಇರುವದರಿಂದ ನಡೆದುಕೊಂಡು ಬರಲು ಕಷ್ಟವಾಗುತ್ತಿದೆ ಎಂದು ಹೇಳಿದರು. ಸಂಪಾಜೆಯಲ್ಲಿ 62 ಮಂದಿ ಬಾಣಂತಿಯರು, 69 ಮಂದಿ ಗರ್ಭಿಣಿಯರಿದ್ದಾರೆ. ಪೆರಾಜೆಯಲ್ಲಿ 44 ಮಂದಿ ಬಾಣಂತಿಯರು, 40 ಮಂದಿ ಗರ್ಭಿಣಿಯರಿದ್ದಾರೆ. ಆದರೆ ಶೇ. 25ರಷ್ಟು ಮಂದಿ ಮಾತ್ರ ಕೇಂದ್ರಗಳಿಗೆ ಆಗಮಿಸಿ ಸೌಲಭ್ಯ ಪಡೆದು ಕೊಳ್ಳುತ್ತಿರುವದಾಗಿ ಸವಿತಾ ಮಾಹಿತಿ ನೀಡಿದರು.
ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುದ್ದಂಡ ರಾಯ್ ತಮ್ಮಯ್ಯ ಅವರುಗಳು ಯೋಜನೆ ಉತ್ತಮವಾಗಿದೆ. ಆದರೆ ಕೊಡಗು ಗುಡ್ಡಗಾಡು ಪ್ರದೇಶವಾಗಿರುವದರಿಂದ ಕಷ್ಟ. ಸೌಲಭ್ಯಗಳನ್ನು ಮನೆ ಮನೆಗೆ ತಲಪಿಸುವ ವ್ಯವಸ್ಥೆ ಮಾಡಿಕೊಡುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಅಧಿಕಾರಿಗೆ ಸೂಚಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ಸವಿತಾ ಅವರು ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರದೊಂದಿಗೆ ಔಷಧಿ, ತಪಾಸಣೆ, ತೂಕ ಪರೀಕ್ಷೆ ಮಾಡಿ ಪ್ರತಿದಿನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಹಾಗಾಗಿ ಮನೆಗೆ ತಲಪಿಸುವದು ಸಾಧ್ಯವಿಲ್ಲ. ಒಂದು ತಿಂಗಳವರೆಗಿನ ಪ್ರಗತಿ ನೋಡಿ ಬಳಿಕ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವದೆಂದು ತಿಳಿಸಿದರು. ಅಲ್ಲದೆ ಅಂಗನವಾಡಿ ಕಾರ್ಯಕರ್ತರನ್ನು ಎಲ್ಲ ಕೆಲಸಗಳಿಗೆ ಬಳಸಿಕೊಳ್ಳುವದರಿಂದ ಬಹಳ ಕಷ್ಟವಾಗುತ್ತಿದೆ. ಮಾತೃಪೂರ್ಣ ಯೋಜನೆ ಬಂದ ಬಳಿಕ ಇನ್ನಷ್ಟು ತೊಂದರೆಯಾಗಿದೆ ಎಂದು ಸವಿತಾ ಹೇಳಿದರು.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಗಿರಿಜನ ಉಪ ಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ಫಲಾನುಭವಿಗಳಿಗೆ ಇಂಡಕ್ಷನ್ ಸ್ಟೌವ್, ಕುಕ್ಕರ್ ನೀಡುವ ವ್ಯವಸ್ಥೆ ಇರುವದಾಗಿ ಅಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಅಧ್ಯಕ್ಷರು ಕೆಲವು ಮನೆಗಳಲ್ಲಿ ವಿದ್ಯುತ್ ಇಲ್ಲದ್ದರಿಂದ ಇಂಡಕ್ಷನ್ ಬದಲಿಗೆ ಅಡುಗೆ ಅನಿಲ, ಸ್ಟೌ ನೀಡುವಂತೆ ಸಲಹೆ ನೀಡಿದರು. ಭಾರತ್ ಗ್ಯಾಸ್ ಸಂಪರ್ಕ ಒದಗಿಸುವಂತೆ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನಿಡಿ ಡೆಂಗ್ಯೂ ಪ್ರಕರಣ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೇವಲ 2 ಪ್ರಕರಣ ಮಾತ್ರ ಪತ್ತೆಯಾಗಿರುವದಾಗಿ ಮಾಹಿತಿ ನೀಡಿದರು. ಇನ್ನುಳಿದಂತೆ ಕೃಷಿ, ತೋಟಗಾರಿಕೆ, ಸಹಕಾರ, ಆಯುಷ್, ಅಕ್ಷರ ದಾಸೋಹ, ವಿದ್ಯುತ್ ಸೇರಿದಂತೆ ಇತರ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯನಿರ್ವಹಣಾಧಿಕಾರಿ ಜೀವನ್ ಕುಮಾರ್ ಹಲವು ಸಲಹೆ - ಸೂಚನೆ ನೀಡಿದರು.