ಮಡಿಕೇರಿ. ಅ. 11: ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳು ಸಾಕಷ್ಟು ಸಹಕಾರಿಯಾಗಿದ್ದು ಲಂಚಾವತಾರಕ್ಕೆ ತಡೆಯೊಡ್ಡಲು ಇಂಥ ತಂತ್ರಜ್ಞಾನ ಗಳನ್ನು ಶ್ರೀಸಾಮಾನ್ಯರೂ ಅಳವಡಿಸಿಕೊಳ್ಳವದು ಸೂಕ್ತ ಎಂದು ವೀರಾಜಪೇಟೆ ರೋಟರಿ ಅಧ್ಯಕ್ಷ, ವಕೀಲ ಬಲ್ಯಮಾಡ ಬಿ.ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಆಯೋಜಿಸಿದ್ದ ಆಧುನಿಕ ತಂತ್ರಜ್ಞಾನದ ಅಗತ್ಯತೆ ಕುರಿತ ಮಾಹಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾದಪ್ಪ, ಇತ್ತೀಚಿನ ದಿನಗಳಲ್ಲಿ ಅಂಗೈನಲ್ಲಿಯೇ ಮೊಬೈಲ್ ಮೂಲಕ ಅನೇಕ ನೂತನ ತಂತ್ರಜ್ಞಾನಗಳು ಜನಸಾಮಾನ್ಯರಿಗೂ ದೊರಕುತ್ತಿದ್ದು ಇಂಥ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದರು. ಕಂದಾಯ ಕಚೇರಿಗಳಲ್ಲಿ ಪಾರದರ್ಶಕ ರೀತಿಯಲ್ಲಿ ಕಡತ ವಿಲೇವಾರಿ ಸಾಧ್ಯವಾಗಿದ್ದು ಕೃಷಿ ಕ್ಷೇತ್ರದಲ್ಲಿಯೂ ಆಧುನಿಕ ತಂತ್ರಜ್ಞಾನದಿಂದಾಗಿ ಕೃಷಿಕರು ಲಂಚದಿಂದ ಮುಕ್ತರಾಗಿ ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಪಡೆಯುವದು ಸಾಧ್ಯವಾಗಿದೆ ಎಂದು ಅವರು ಉದಾಹರಣೆ ನೀಡಿದರು. ಭಾರತವನ್ನು ಆಧುನಿಕ ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬದಲಾಯಿಸಬಲ್ಲದು ಎಂದೂ ಮಾದಪ್ಪ ಅಭಿಪ್ರಾಯಪಟ್ಟರು.
ಸರ್ಕಾರಿ ಕೆಲಸ ಎಂದರೆ ಕೆಲಸ ಮಾಡದೇ ಸಂಬಳ ಪಡೆಯುವದು ಎಂಬ ಅನೇಕರ ಭಾವನೆ ಆಧುನಿಕ ತಂತ್ರಜ್ಞಾನದಿಂದಾಗಿ ಸುಳ್ಳಾಗುತ್ತಿದೆ. ಅನಕ್ಷರಸ್ಥ ಕೂಡ ಸಂಕೇತದ ನೆರವಿನಿಂದಾಗಿ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸುವಂತಾಗಿರುವದು ಶ್ಲಾಘನೀಯ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಅತಿಥಿಗಳ ಪರಿಚಯ ನೆರವೇರಿಸಿದರು. ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್ ವಂದಿಸಿದರು. ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಕಲ್ಮಾಡಂಡ ಶಶಿಮೊಣ್ಣಪ್ಪ, ಡಾ. ಕುಲಕರ್ಣಿ, ನಾರಾಯಣ ರಾವ್ ರೋಟರಿ ಸೇವಾ ಮಾಹಿತಿ ನೀಡಿದರು.