ಮಡಿಕೇರಿ, ಅ. 10: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹಲವಾರು ಶಾಲೆಗಳ ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿವೆ ಎಂಬ ವಿಚಾರ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಗೊಳಗಾಯಿತು.
ಸಭೆಯಲ್ಲಿ ಜಿ.ಪಂ. ಸದಸ್ಯರಾದ ಸರೋಜಮ್ಮ, ಸಿ.ಕೆ. ಬೋಪಣ್ಣ ಈ ಬಗ್ಗೆ ಪ್ರಸ್ತಾಪಿಸಿದರು. ಶಾಲೆಗಳ ದುರಸ್ತಿಗೆಂದು ಬರುತ್ತಿರುವ ಅನುದಾನ ಏನೇನೂ ಸಾಲದು. ಹಲವು ಕಡೆಗಳಲ್ಲಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳಬೇಕಾದ ಪರಿಸ್ಥಿತಿಯಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ದಾನೋಜಿ ಅವರು, ಸರಕಾರದಿಂದ ಶಾಲಾ ದುರಸ್ತಿಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ಇಂತಿಷ್ಟು ಶಾಲೆಗಳಿಗೆ ಇಂತಿಷ್ಟು ಹಣ ಬಿಡುಗಡೆಯಾಗುತ್ತದೆ. ಎಲ್ಲಾ ಶಾಲೆಗಳಿಗೂ ಒಟ್ಟಾಗಿ ಅನುದಾನ ಬಿಡುಗಡೆ ಆಗುವದಿಲ್ಲ ಎಂದರು. ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸಿ.ಕೆ. ಬೋಪಣ್ಣ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವದಾಗಿ ದಾನೋಜಿ ಹೇಳಿದರು.
ಜಾಗ ಖರೀದಿಗಾಗಿ ನೀಡಲಾಗುವ 11 ಬಿ ನಮೂನೆಯನ್ನು ನೀಡಲು ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅಧಿಕಾರಿಗಳು ಇಲ್ಲಸಲ್ಲದ ಕಾರಣ ನೀಡಿ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಸಾರ್ವಜನಿಕರಿಗೆ ಸಹಕಾರ ನೀಡಬೇಕೆಂದು ಸದಸ್ಯ ಲತೀಫ್ ಮನವಿ ಮಾಡಿದರು.
ತೋಟದ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನಲ್ಲಿ ಅನುಮತಿ ಸಿಗುತ್ತಿದೆ. ಆದರೆ ಮಡಿಕೇರಿ ತಾಲೂಕಿನಲ್ಲಿ ಅನುಮತಿ ನೀಡಲು ಮಡಿಕೇರಿ ತಾಲೂಕು ತಹಶೀಲ್ದಾರರು ಕಾನೂನು ನೆಪವೊಡ್ಡಿ ನಿರಾಕರಿಸುತ್ತಿದ್ದಾರೆ. ಸೋಮವಾರಪೇಟೆ ಹಾಗೂ ಮಡಿಕೇರಿಯಲ್ಲಿ ಪ್ರತ್ಯೇಕ ಕಾನೂನುಗಳಿವೆಯೆ ಎಂದು ಸದಸ್ಯ ಮುರಳಿ ಕರುಂಬಮಯ್ಯ ಪ್ರಶ್ನಿಸಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಮನೆ ಮಂಜೂರಾಗಿ ದ್ದರೂ, ಮನೆ ನಿರ್ಮಿಸಿಕೊಳ್ಳಲು ಅರಣ್ಯಾಧಿಕಾರಿಗಳು ಬಿಡುತ್ತಿಲ್ಲ ಎಂದು ಸದಸ್ಯ ಪ್ರಥ್ಯು ಆರೋಪಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜ ಹೇಳಿದರು.
ಕರಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ 9 ತಿಂಗಳಿನಿಂದ ಗ್ರಾಮ ಸಭೆ ನಡೆದಿಲ್ಲ. ಜನತೆ ತಮ್ಮ ಸಮಸ್ಯೆಗಳನ್ನು ಎಲ್ಲಿ ಹೇಳಿಕೊಳ್ಳುವದು ಎಂದು ಸದಸ್ಯೆ ಕವಿತಾ ಪ್ರಭಾಕರ್ ಪ್ರಶ್ನಿಸಿದರು. 9 ತಿಂಗಳಿನಿಂದ ಸಭೆ ನಡೆಯದ ಬಗ್ಗೆ ತಾನು ಮಾಹಿತಿ ಪಡೆದಿದ್ದು, ಕೂಡಲೇ ಸಭೆ ನಡೆಸುವಂತೆ ಪಿಡಿಓ ಅವರಿಗೆ ಸೂಚಿಸಿದ್ದೇನೆ ಎಂದು ಇಓ ಜೀವನ್ ಕುಮಾರ್ ತಿಳಿಸಿದರು.
ಶಾಲೆಗಳಿಗೆ ದಾಸೋಹಕ್ಕಾಗಿ ಸರಬರಾಜಾಗುವ ಅಕ್ಕಿ ಚೀಲಗಳಲ್ಲಿ ತೂಕದಲ್ಲಿ ವ್ಯತ್ಯಾಸಗಳಿರುವದಾಗಿ ದೂರುಗಳು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಡಿಜಿಟಲ್ ಸ್ಕೇಲ್ ಅಳವಡಿಸಲು ಕ್ರಮಕೈಗೊಳ್ಳುವದು ಒಳಿತು ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.