ಮಡಿಕೇರಿ, ಅ. 11: ಗ್ಯಾಟ್ ಒಪ್ಪಂದದ ಕರಾರಿನಂತೆ ವಿದೇಶದಿಂದ ಅನಿವಾರ್ಯವಾಗಿ ಆಮದಾಗುವ ಕಾಳುಮೆಣಸಿನಿಂದ ಸ್ಥಳೀಯ ಉತ್ಕøಷ್ಟ ಮಟ್ಟದ ಗರಿಷ್ಠ ಬೆಲೆಯ ಕಾಳುಮೆಣಸು ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದ್ದು, ಆ ಕಾರಣ ವಿಯಟ್ನಾಂ ಹಾದಿಯಾಗಿ ವಿದೇಶದಿಂದ ಆಮದಾಗುವ ಕಾಳುಮೆಣಸಿಗೆ ಆಮದು ತೆರಿಗೆ ಅತ್ಯಧಿಕ ಪ್ರಮಾಣದಲ್ಲಿ ವಿಧಿಸುವ ಮೂಲಕ ದೇಶಿ ಉತ್ಪಾದನೆಯನ್ನು ರಕ್ಷಿಸಿ ಪೋಷಿಸಬೇಕು ಎಂದು ಕೇಂದ್ರ ವಾಣಿಜ್ಯ ಮಂತ್ರಿಗಳಿಗೆ ಸಿ.ಎನ್.ಸಿ. ಪತ್ರ ಬರೆದಿದೆ.
ಗೋಣಿಕೊಪ್ಪಲು ಆರ್.ಎಂ.ಸಿ. ಆವರಣದಲ್ಲಿ ವಿಯಟ್ನಾಂ ಕರಿಮೆಣಸು ಮಿಶ್ರಣದ ಸಂಬಂಧ ಸಿ.ಎನ್.ಸಿ. ಈ ಪತ್ರ ಬರೆದಿದ್ದು, ಭಾರತ ಸರ್ಕಾರ ಹಿಂದೆ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ದೇಶದಲ್ಲಿ ಯಾವದೇ ಉತ್ಪಾದನೆ ಗರಿಷ್ಠ ಪ್ರಮಾಣದಲ್ಲಿದ್ದು, ಉತ್ಕøಷ್ಟ ಮಟ್ಟದ್ದಾಗಿದ್ದು, ಈ ದೇಶದ ಬಳಕೆಗೆ ಸಮರ್ಪಕವಾಗಿ ಉಪಯೋಗವಾಗುವಷ್ಟು ಉತ್ಪಾದನೆ ಇದ್ದಾಗಿಯೂ ವಿದೇಶದ ಉತ್ಪಾದನೆಗಳನ್ನು ಆಮದು ಮಾಡಲೇಬೇಕೆಂಬ ಖಡ್ಡಾಯ ಕರಾರು ವ್ಯವಸ್ಥೆ ಇರುವದರಿಂದ ಸಮಸ್ಯೆ ಎದುರಾಗಿದೆ ಎಂದು ಸಿ.ಎನ್.ಸಿ. ಅಧ್ಯಕ್ಷ ನಾಚಪ್ಪ ಆರೋಪಿಸಿದ್ದಾರೆ.
ಅಂತೆಯೇ ವಿದೇಶದಲ್ಲಿ ಅದೆಷ್ಟೇ ನಮ್ಮದೇ ತೆರನಾದ ವಾಣಿಜ್ಯ ವಸ್ತು ಉತ್ಪಾನೆಯಾಗುತ್ತಿದ್ದರೂ ನಮ್ಮ ಭಾರತದ ಉತ್ಪಾದನೆಯನ್ನು ಕೂಡ ವಿದೇಶದವರು ಬೇಡವೆನ್ನುವಾಗಿಲ್ಲ. ಆದರೆ ಅದನ್ನು ನಿಯಂತ್ರಿಸಲು ಏಕೈಕ ಮಾರ್ಗವೆಂದರೆ ಅತ್ಯಧಿಕ ಪ್ರಮಾಣದ ಆಮದು ಸುಂಕವನ್ನು ಹೇರುವ ಮೂಲಕ ಹತೋಟಿಗೆ ತರಬಹುದಾಗಿದೆ. ಹೀಗಿರುವಾಗ ಸ್ಥಳೀಯ ಉತ್ಪಾದನೆಗೆ ವಿದೇಶದ ಉತ್ಪಾದನೆಯ ಆಮದಿನಿಂದ ಹೊಡೆತ ಬಿದ್ದೇ ಬೀಳುತ್ತದೆ. ಆದರೆ ಅದನ್ನು ತಡೆದು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲಿರುವ ಏಕೈಕ ಮಾರ್ಗವೆಂದರೆ ವಿದೇಶದಿಂದ ಆಮದಾಗುವ ಉತ್ಪಾದನೆಗೆ ಅತೀ ಹೆಚ್ಚು ಆಮದು ಸುಂಕ (ಇಂಪೋರ್ಟ್ ಡ್ಯೂಟಿ) ಹೇರುವ ಮೂಲಕ ಅದನ್ನು ತಹಬದಿಗೆ ತಂದು ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಾಗಿದೆ ಎಂದು ಎನ್.ಯು. ನಾಚಪ್ಪ ಸಲಹೆ ನೀಡಿದ್ದಾರೆ.