ಕೂಡಿಗೆ, ಅ. 10: ಇಂದು ಯಡವನಾಡಿನ ಗಿರಿಜ ಕುಟುಂಬದವರು ತಮಗೆ 2016ರಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸಮಕ್ಷಮದಲ್ಲಿ ಸರ್ವೆ ನಡೆಸಿ ಮೀಸಲಿರಿಸಿದ್ದ ಜಾಗಕ್ಕೆ ಪ್ರವೇಶಿಸಿ ಕಾಡುಕಡಿದು ಗುಡಿಸಲು ಕಟ್ಟಲು ಮುಂದಾಗಿದ್ದಾರೆ. ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಹಾಗೂ ಹುದುಗೂರು ಅರಣ್ಯ ಅಧಿಕಾರಿ ಸತೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಗುಡಿಸಲು ನಿರ್ಮಿಸುತ್ತಿದ್ದ ಜೇನುಕುರುಬ ಕುಟುಂಬದವರನ್ನು ತಡೆದರು.ಸ್ಥಳಕ್ಕಾಗಮಿಸಿದ ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ಸಂಚಾಲಕ, ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಸ್ಥಳಕ್ಕೆ ತೆರಳಿದ ಸುದ್ಧಿಗಾರರೊಂದಿಗೆ ಮಾತನಾಡುತ್ತಾ, ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಯಡವನಾಡು ಮೀಸಲು ಅರಣ್ಯವನ್ನು ಹೊರತುಪಡಿಸಿ ಉಳಿದ 87.5 ಎಕರೆ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ಯಡವನಾಡು ಗಿರಿಜನ ಕುಟುಂಬಗಳಿಗೆ ಮೀಸಲಿರಿಸಲಾಗಿದೆ ಎಂದು ಸಮರ್ಥಿಸಿದರು. 2016ರಲ್ಲಿ ಸರ್ವೇ ನಡೆಸಿ ಜಾಗವನ್ನು ಗುರುತಿಸಲಾಗಿತ್ತು.