ಮಡಿಕೇರಿ, ಅ. 10: ಗೋಣಿಕೊಪ್ಪಲು ಎಪಿಎಂಸಿಯಲ್ಲಿ ಗ್ಯಾಟ್ ಒಪ್ಪಂದದ ಪ್ರಕಾರ ವಿಯೆಟ್ನಾಂನಿಂದ ಕರಿಮೆಣಸು ಅಮದು ಮಾಡಿಕೊಂಡು ಇಲ್ಲಿನ ಕರಿಮೆಣಸಿನೊಂದಿಗೆ ಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣದ ಕುರಿತಾದ ಎಲ್ಲ ರೀತಿಯ ತನಿಖೆಗೆ ಜಿ.ಪಂ.ನಿಂದ ಸಹಕಾರ ನೀಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ.ಇಲ್ಲಿನ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ಬಾನಂಡ ಪ್ರಥ್ಯು ಅವರು, ಗೋಣಿಕೊಪ್ಪ ಎಪಿಎಂಸಿಯಲ್ಲಿ ವಿಯೆಟ್ನಾಂ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವದರಿಂದ ಕೊಡಗಿನ ಕರಿಮೆಣಸು ಧಾರಣೆ ಸಂಪೂರ್ಣ ಕುಸಿದಿದೆ. ಇದು ರೈತರಿಗೆ ಮಾಡಿ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿ, ಎಪಿಎಂಸಿ ಆಡಳಿತವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು. ಇಲ್ಲವಾದಲ್ಲಿ ಸದನದಲ್ಲಿ ಧರಣಿ ಕೂರುವದಾಗಿ ಹೇಳಿದರು. ಸದಸ್ಯ ಶಿವು ಮಾದಪ್ಪ, ಅಬ್ದುಲ್ ಲತೀಫ್ ಇದಕ್ಕೆ ದನಿಗೂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಡ ಸದಸ್ಯರುಗಳಾದ ಮುರಳಿ ಕರುಂಬಮಯ್ಯ, ಮಹೇಶ್ ಗಣಪತಿ, ಸಿ.ಕೆ. ಬೋಪಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿಜುಸುಬ್ರಮಣಿ, ಶಶಿ ಸುಬ್ರಮಣಿ, ಶ್ರೀನಿವಾಸ್ ಇನ್ನಿತರರು ಒಪ್ಪಂದಕ್ಕೆ ಸಹಿ ಮಾಡಿದ್ದು, ನಿಮ್ಮ ಕಾಂಗ್ರೆಸ್ ಸರಕಾರ, ನಮಗೂ ರೈತರ ಬಗ್ಗೆ ಕಾಳಜಿ ಇದೆ, ಕಲಬೆರಕೆ ಮಾಡಿರುವದಕ್ಕೆ ದಾಖಲೆ ಒದಗಿಸಿ ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ವಿಪಕ್ಷ ಸದಸ್ಯರು, ಗ್ಯಾಟ್ ಒಪ್ಪಂದಕ್ಕೆ ಕಾಂಗ್ರೆಸ್ ಸರಕಾರ ಸಹಿ ಮಾಡಿದೆ. ಕಲಬೆರಕೆ ಮಾಡಲಿಕ್ಕೆ ಅಲ್ಲವೆಂದು ತಿರುಗೇಟು ನೀಡಿದರಲ್ಲದೆ, ಮಹಿಳಾ ಸದಸ್ಯರುಗಳಾದ ಚಂದ್ರಕಲಾ,
(ಮೊದಲ ಪುಟದಿಂದ) ಪಂಕಜ, ಸುನಿತಾ, ಶ್ರೀಜಾ ಸೇರಿದಂತೆ ಎಲ್ಲರೂ ಸದನದ ಬಾವಿಯೊಳಗೆ ಇಳಿದು ಧರಣಿ ಕುಳಿತರು.
ಈ ಸಂದರ್ಭ ಇದು ಜಿ.ಪಂ. ವ್ಯಾಪ್ತಿಗೆ ಬರುವದಿಲ್ಲ. ಈ ಬಗ್ಗೆ ಈಗಾಗಲೇ ತನಿಖೆ ಆಗುತ್ತಿದೆ. ಜಿ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗದೆಂದು ಅಧ್ಯಕ್ಷ ಹರೀಶ್ ಹೇಳಿದರು. ಇದನ್ನು ಆಕ್ಷೇಪಿಸಿದ ವಿಪಕ್ಷ ಸದಸ್ಯರು ಧರಣಿ ಮುಂದುವರಿಸಿದರು. ಈ ಸಂದರ್ಭ ಬಿಜೆಪಿ ಸದಸ್ಯರುಗಳು ಅಧ್ಯಕ್ಷರ ಬಳಿ ತೆರಳಿ ಪರವಾಗಿ ನಿಂತರು. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ ಅಧ್ಯಕ್ಷರು 10 ನಿಮಿಷಗಳವರೆಗೆ ಸಭೆಯನ್ನು ಮುಂದೂಡಿದರು.
ನಂತರ ಮುಂದುವರಿದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವಂತೆ ವಿಪಕ್ಷ ಸದಸ್ಯರು ಪಟ್ಟು ಹಿಡಿದರು. ಅಂತಿಮವಾಗಿ ಅಧ್ಯಕ್ಷರು ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಯಾವದೇ ತನಿಖೆ ನಡೆದರೂ ಜಿ.ಪಂ.ನ ಸರ್ವ ಸದಸ್ಯರು ಸಹಕಾರ ನೀಡುವ ಬಗ್ಗೆ ನಿರ್ಣಯ ಪ್ರಕಟಿಸಿದರು.
ಜಿಲ್ಲೆಯಲ್ಲಿ ಪ್ರತೀ ವರ್ಷ ಸರಾಸರಿ 2 ಸಾವಿರ ಮಿ.ಮೀ ಮಳೆಯಾಗುತ್ತದೆ. ಆದರೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ, ಶಾಶ್ವತ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಬೇಕಿದೆ ಎಂದು ಸದಸ್ಯರು ಒತ್ತಾಯಿಸಿದರು.
ನೀರಿಗೆ ನಿಯೋಗ : ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವದು, ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಹಾಕದೆ ಪರಿಸರ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಮುರಳಿ ಕರುಂಬಮ್ಮಯ್ಯ ಸಲಹೆ ಮಾಡಿದರು.
ಈ ಸಂಬಂಧ ಮಾಹಿತಿ ನೀಡಿದ ಜಿ.ಪಂ.ಕಾರ್ಯಪಾಲಕ ಇಂಜಿನಿಯರ್ ರಾಜ್‍ಕುಮಾರ್ ರೆಡ್ಡಿ ಅವರು ಕುಡಿಯುವ ನೀರು ಕಾಮಗಾರಿಗಳಿಗಾಗಿ ಪ್ರಸಕ್ತ ವರ್ಷದಲ್ಲಿ ರೂ. 26 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಡಿಕೇರಿ ತಾಲೂಕಿನಿಂದ ರೂ. 4 ಕೋಟಿ, ಸೋಮವಾರಪೇಟೆ ರೂ. 7 ಕೋಟಿ ಮತ್ತು ವೀರಾಜಪೇಟೆ ತಾಲೂಕಿನ ರೂ. 14 ಕೋಟಿ ವೆಚ್ಚದ ಕುಡಿಯುವ ನೀರು ಕಾಮಗಾರಿಗಳಿಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಓ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕುಡಿಯುವ ನೀರಿನ ಕಾಮಗಾರಿಗಳ ನ್ಯೂನತೆ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವದು. ಹಾಗೆಯೇ 12 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಲಾಗುವದು. ಶುದ್ಧ ನೀರಿನ ಘಟಕ್ಕ ಸ್ಥಾಪನೆಗೆÉ ಕೂಡಲೇ ಕ್ರಮ ಕೈಗೊಳ್ಳುವಂತೆ ಅಭಿಯಂತರರಿಗೆ ಸೂಚಿಸಿದರು.
ಅಧ್ಯಕ್ಷ ಹರೀಶ್ ಅವರು ಕುಡಿಯುವ ನೀರು ಕಾಮಗಾರಿ ಸಂಬಂಧ ಸಮಗ್ರ ವರದಿ ನೀಡುವಂತೆ ಜಿ.ಪಂ. ಇಂಜಿನಿಯರ್‍ಗೆ ಸೂಚನೆ ನೀಡಿದರು.
ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್ ಅವರು ಕರಿಕೆ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಯಲ್ಲಿ ಗಮನ ಸೆಳೆದರು.
ಇದಕ್ಕೆ ಮಾಹಿತಿ ನೀಡಿದ ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಅವರು ಕರಿಕೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ತೊಂದರೆಯಾಗಿದೆ. ಕೇರಳ ಗಡಿಭಾಗದಿಂದ ವಿದ್ಯುತ್ ಸಂಪರ್ಕ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಪ್ರಥ್ಯು ಅವರು ಕೇರಳ ಕರಿಕೆ ಗಡಿಭಾಗದ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಅವರು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಕುಡಿಯುವ ನೀರು ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತಾಗಲು ಸರ್ಕಾರಕ್ಕೆ ನಿಯೋಗ ತೆರಳಲು ಸಭೆಯಲ್ಲಿ ಜಿ.ಪಂ.ಅಧ್ಯಕ್ಷರು ಪ್ರಕಟಿಸಿದರು.
ಜಲಪಾತಕ್ಕೆ ಬಲಿ : ಜಿಲ್ಲೆಯ ಚೇಲಾವರ ಜಲಪಾತದಲ್ಲಿ ಕಳೆದ ಒಂದು ತಿಂಗಳಲ್ಲಿ 15 ಯುವಕರು ಬಲಿಯಾಗಿದ್ದು, ಪ್ರವಾಸಿಗರು ಬಲಿಯಾಗುತ್ತಿರುವದಕ್ಕೆ ಹೊಣೆಗಾರರು ಯಾರು ಎಂದು ಕಿರಣ್ ಕಾರ್ಯಪ್ಪ ಅವರು ಸಭೆಯಲ್ಲಿ ಪ್ರಶ್ನಿಸಿದರು.
ಚೇಲಾವರ ಜಲಪಾತದಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲದ ಹಿನ್ನೆಲೆ ಪ್ರವಾಸಿಗರು ಜಲಪಾತದ ಸುಳಿಗೆ ಸಿಲುಕಿ ಮರಣ ಹೊಂದುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜಲಪಾತದ ಗುಂಡಿಗೆ ಕಲ್ಲು ಮುಚ್ಚುವ ಕಾರ್ಯವಾಗಿದೆ. ಹಾಗೆಯೇ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಜೊತೆಗೆ ಜಲಪಾತದ ಬಳಿ ಮೆಟ್ಟಿಲುಗಳ ನಿರ್ಮಾಣಕ್ಕೆ ಸಂಬಂಧಪಟ್ಟ ಭೂಮಾಲೀಕರೊಂದಿಗೆ ಸಭೆ ನಡೆಸಲಾಗಿದೆ. ಆದರೂ ಮತ್ತೊಮ್ಮೆ ಚೇಲಾವರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಭೂ ಮಾಲೀಕರು ಒಳಗೊಂಡ ಸಭೆಯನ್ನು ಶೀಘ್ರ ಆಹ್ವಾನಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ದೀಪಕ್ ಅವರು ಮಲ್ಲಳ್ಳಿ ಜಲಪಾತದಲ್ಲಿಯೂ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಇಲ್ಲ ಎಂದು ಅವರು ಹೇಳಿದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಲ್ಲಳ್ಳಿ ಜಲಪಾತದ ಬಳಿ ವಾಸಿಸುತ್ತ್ತಿದ್ದವರನ್ನು ತೆರವುಗೊಳಿಸಲಾಗಿದೆ. ಮಲ್ಲಳ್ಳಿಯಲ್ಲಿ ಕುಡಿಯುವ ನೀರು ಸಹ ಸಿಗುತ್ತಿಲ್ಲ. ಯಾವದೇ ರೀತಿಯ ಮೂಲ ಸೌಲಭ್ಯಗಳು ಇಲ್ಲ ಎಂದು ಹೇಳಿದರು. ಪಾರ್ಕಿಂಗ್ ನೆಪದಲ್ಲಿ ಅಧಿಕ ಹಣ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದರು.
ಮತ್ತೊಬ್ಬ ಸದಸ್ಯೆ ಯಾಲದಾಳು ಪದ್ಮಾವತಿ ಅವರು ಅಬ್ಬಿ ಜಲಪಾತದ ಪ್ರವೇಶ ದ್ವಾರದಲ್ಲಿ ಇನ್ನಷ್ಟು ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶುಲ್ಕ ವಸೂಲಿ ಮಾಡಿ ಪಂಚಾಯಿತಿಗೆ ಆದಾಯ ಬರುವಂತಾಗಬೇಕೆಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅವರು ಯಾವದೇ ಪ್ರವಾಸಿ ಕೇಂದ್ರದಲ್ಲಿ ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯವನ್ನು ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು, ಮಲ್ಲಳ್ಳಿಯಲ್ಲಿ ಶುಲ್ಕ ವಸೂಲಿ ಬಗ್ಗೆ ತನಿಖೆ ಮಾಡಲಾಗುವದೆಂದರು.
ಕೃಷಿ ಇಲಾಖೆಯಿಂದ ನೀಡಲಾಗುತ್ತಿರುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ. ಕೃಷಿ ಇಲಾಖೆಯಿಂದ ನೀಡಲಾಗುವ ಟಾರ್ಪಲ್ ವಿತರಣೆ ಹಾಗೂ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಜಿ.ಪಂ.ಸದಸ್ಯೆ ಪಂಕಜ ಹಾಗೂ ಇತರ ಸದಸ್ಯರು ಒತ್ತಾಯಿಸಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷÀ ಶಶಿ ಸುಬ್ರಮಣಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷÀ ಎಚ್.ಆರ್. ಶ್ರೀನಿವಾಸ್, ಎ. ಭವ್ಯ, ಮಹೇಶ್ ಗಣಪತಿ, ಸಿ.ಕೆ. ಬೋಪಣ್ಣ, ಶ್ರೀಜಾ ಶಾಜಿ, ಸರೋಜಮ್ಮ, ಪೂರ್ಣೀಮಾ ಗೋಪಾಲ್, ಕೆ.ಆರ್. ಮಂಜುಳಾ, ಎಂ.ಬಿ. ಸುನಿತಾ, ಬಿ.ಜೆ.ದೀಪಕ್ ಇತರರು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು.
ಇ.ಓ. ತರಾಟೆಗೆ
ಸದಸ್ಯರಾದ ಪ್ರಥ್ಯು ಹಾಗೂ ಶಿವು ಮಾದಪ್ಪ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ಫಡ್ನೇಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು.
ಅಧಿಕಾರಿಯ ಕಚೇರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ, ಯಾವದೇ ಕಾಮಗಾರಿ ನಡೆಯಬೇಕಿದ್ದರೂ ಗ್ರಾ.ಪಂ. ಅಧ್ಯಕ್ಷರು, ಗುತ್ತಿಗೆದಾರರು ಇವರನ್ನು ಸಂಜೆ 5.30ರ ಬಳಿಕ ಕಚೇರಿಯಲ್ಲಿ ಭೇಟಿ ಮಾಡಬೇಕು, ಯಾವದೇ ಕಾರ್ಯಕ್ರಮಗಳಿಲ್ಲದಿದ್ದರೂ ವಾಹನ ಉಪಯೋಗಿಸುತ್ತಾರೆ. ದುರುಪಯೋಗದೊಂದಿಗೆ ಎಲ್ಲರೊಂದಿಗೂ ಉಡಾಫೆಯಿಂದ ವರ್ತಿಸುತ್ತಾರೆಂದು ಆರೋಪಿಸಿದರು. ಕಚೇರಿಯಲ್ಲಿ ಬಾಕಿ ಉಳಿದಿರುವ ಕಡತಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಶಶಿ ಸುಬ್ರಮಣಿ ಅವರು ತುರ್ತು ಸಂದರ್ಭದಲ್ಲಿ ವಾಹನ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು. ಅಧ್ಯಕ್ಷ ಹರೀಶ್ ಅವರು ಕೂಡಲೇ ಸಿಸಿ ಕ್ಯಾಮರಾ ಅಳವಡಿಸುವದರೊಂದಿಗೆ ಎಲ್ಲ ಮಾಹಿತಿ ನೀಡುವಂತೆ ಅಧಿಕಾರಿಗೆ ಸೂಚಿಸಿದರು.