ಕುಶಾಲನಗರ, ಅ. 11: ಕಾಂಗ್ರೆಸ್ ಮುಕ್ತ ರಾಜ್ಯ ನಿರ್ಮಾಣಕ್ಕೆ ಬಿಜೆಪಿ ಪಣತೊಟ್ಟಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಅವರು ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಡವರ ಸಂಕಷ್ಟಕ್ಕೆ ದೇಶದಾದ್ಯಂತ ಪರಿಹಾರ ಒದಗಿಸಲು ಪ್ರಯತ್ನಿಸು ತ್ತಿರುವ ಪ್ರಧಾನಮಂತ್ರಿಗಳ ಯೋಜನೆ ಗಳನ್ನು ರಾಜ್ಯ ಸರಕಾರ ತಮ್ಮ ಯೋಜನೆಯೆಂದು ಬಿಂಬಿಸುತ್ತಿರುವದು ಕಂಡುಬರುತ್ತಿದೆ. ರಾಜ್ಯ ಸರಕಾರದ ಆಡಳಿತ ಸಂಪೂರ್ಣ ಕುಸಿದಿದ್ದು ಜನತೆ ಬದಲಾವಣೆ ಬಯಸಿದ್ದಾರೆ ಎಂದರು.
2018 ರ ಡಿಸೆಂಬರ್ ಒಳಗಾಗಿ ಕೇಂದ್ರ ಸರಕಾರ ಇಡೀ ರಾಷ್ಟ್ರವನ್ನು ಹೊಗೆಮುಕ್ತ ಗ್ರಾಮಗಳನ್ನಾಗಿ ಮಾಡುವ ಯೋಜನೆ ಮೂಲಕ ರೂ. 5 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಉದ್ದೇಶಿಸಿದೆ. ಕೊಡಗು ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳ ವಿದ್ಯುತ್ ಸಂಪರ್ಕ ಅಭಿವೃದ್ಧಿಗಾಗಿ ರೂ. 50 ಕೋಟಿ ವ್ಯಯ ಮಾಡಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಇಬ್ಬರು ಶಾಸಕರು ಜಯಭೇರಿ ಗಳಿಸುವ ಮೂಲಕ ಮುಂದಿನ ರಾಜ್ಯ ಸರಕಾರದಲ್ಲಿ ಸಚಿವರಾಗುವ ಬಗ್ಗೆ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ, ಕೆ.ಜಿ. ಬೋಪಯ್ಯ, ಭಾರತೀಯ ಜನತಾ ಪಕ್ಷ ಯಾವದೇ ವ್ಯಕ್ತಿ ಅಥವಾ ಕುಟುಂಬದ ಪಕ್ಷವಲ್ಲ. ಕಾರ್ಯಕರ್ತರು ಪಕ್ಷದ ಆಸ್ತಿ ಎಂದರು. ಗ್ರಾಮ ಸಮಿತಿ ಮೂಲಕ ಪಕ್ಷ ಕಟ್ಟಿ ಸರಕಾರ ರಚಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಕ ರಾಷ್ಟ್ರದ ಗೌರವ ಹೆಚ್ಚಳಗೊಂಡಿದೆ ಎಂದರಲ್ಲದೆ ರಾಜ್ಯ ಕಾಂಗ್ರೆಸ್ ಸರಕಾರದ ಅವನತಿ ಸನಿಹದಲ್ಲಿದೆ. ಕಾಂಗ್ರೆಸ್‍ನ ಮುತ್ಸದ್ದಿಗಳೇ ಸರಕಾರದ ಆಡಳಿತದ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿರುವದಾಗಿ ತಿಳಿಸಿದರು.
ಸೋಮವಾರಪೇಟೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ರೂ. 1800 ಕೋಟಿಯಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಂಡಿರುವದಾಗಿ ಹೇಳಿದರು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಮತ್ತು ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಪ್ರತಿ ಮನೆಮನೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಈಗಾಗಲೇ ತೊಡಗಿಸಿಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ವಿ.ಕೆ. ಲೋಕೇಶ್, ರಾಬಿನ್ ದೇವಯ್ಯ, ಜಿಲ್ಲಾ ವಿಸ್ತಾರಕ್ ಜಪ್ಪಣ್ಣ ಮತ್ತಿತರರು ಇದ್ದರು.