ಗೋಣಿಕೊಪ್ಪಲು/ಮಡಿಕೇರಿ, ಅ. 10: ವಿಯೆಟ್ನಾಂನಿಂದ ಕಾಳುಮೆಣಸು ಆಮದು ಮಾಡಿಕೊಂಡು ಕಲಬೆರಕೆ ಮೂಲಕ ವ್ಯಾಪಾರ ಮಾಡಲು ಅವಕಾಶ ನೀಡಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕೃಷಿಕರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಆಯೋಜಿಸಿದ್ದ ಟ್ರ್ಯಾಕ್ಟರ್ ಜಾಥಾದಲ್ಲಿ ಪಕ್ಷಬೇಧ ಮರೆತು ರೈತರು ಪಾಲ್ಗೊಂಡರು.ಅಂತರ್ರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ ನಾಚಪ್ಪ ಕಾಳುಮೆಣಸು ಬಳ್ಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ರೈತರ ಹಿತವನ್ನು ಕಾಪಾಡಬೇಕಾದ ಸಮಿತಿ ವ್ಯಾಪಾರಿಗಳ ಪರ ನಿಂತಿರುವದು ವಿರ್ಪಯಾಸ, ಮುಂದಿನ ದಿನಗಳಲ್ಲಿ ರೈತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು, ತಾನು ಕೂಡ ಇಂತಹ ನ್ಯಾಯ ಪರ ಹೋರಾಟಕ್ಕೆ ಬೆಂಬಲ ನೀಡುವದಾಗಿ ಹೇಳಿದರು.
ಬಿಜೆಪಿ ಆಡಳಿತವಿರುವ ಸಮಿತಿಯ ನಡೆ ವಿರುದ್ಧ ನಡೆದ ಜಾಥಾ ಉದ್ಘಾಟನೆ ಸಂದರ್ಭ ಬಹಳಷ್ಟು ಸಂಖ್ಯೆಯಲ್ಲಿ ಪಕ್ಷದ ಪ್ರಮುಖರು ಪಾಲ್ಗೊಂಡು ನ್ಯಾಯ ಪರ ಹೋರಾಟಕ್ಕೆ ಬೆಂಬಲ ನೀಡಿದರು. ವಿವಿಧ ಪಕ್ಷದ ಕಾರ್ಯ ಕರ್ತರು ಕೂಡ ಪಾಲ್ಗೊಂಡರು.
ರಾಜ್ಯ ರೈತ ಸಂಘದ ಪ್ರದಾನ ಕಾರ್ಯದರ್ಶಿ ಬಡಗಲಕೆರೆ ನಾಗೇಂದ್ರ ಮಾತನಾಡಿ, ಸ್ಥಳೀಯ ರೈತರ ಮುಖ್ಯ ಜೀವನಾದಾರವಾಗಿರುವ ಕರಿಮೆಣಸಿನ ಬೆಲೆ ಹೀಗೆ ಕುಸಿತ ಕಂಡಲ್ಲಿ ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರ ಮಾಡಿಕೊಂಡ ಒಪ್ಪಂದವನ್ನು ಪ್ರಸುತ್ತ ಎನ್‍ಡಿಎ ಸರ್ಕಾರವು ಅದನ್ನು ಉಚಿತ ವಹಿವಾಟು ಆಗಿ ಮಾರ್ಪಡಿಸಿದ್ದು, ಇದರಿಂದ ರೈತರು ಕಷ್ಟ ಅನುಭವಿಸಬೇಕಾಗಿದೆ. ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು ರೈತರಾಗಿದ್ದು, ಕಾಳುಮೆಣಸಿನ ಬೆಲೆ ಕುಸಿತಕ್ಕೆ ಕಾರಣವಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವಿರುದ್ದ ಪಕ್ಷಾತೀತವಾಗಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷ
(ಮೊದಲ ಪುಟದಿಂದ) ಅಳಮೇಂಗಡ ಬೋಸು ಮಾತನಾಡಿ, ಎಪಿಎಂಸಿ ಸದಸ್ಯರು ವ್ಯಾಪಾರಿ ಪರ ನಿಂತಿರುವದು ರೈತರಿಗೆ ಮಾಡುತ್ತಿರುವ ಅವಮಾನ. ಈ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಹರಾಜು ಮಾಡುವ ಪದ್ಧತಿ ಇದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಹೊರದೇಶದಿಂದ ಆಮದು ಮಾಡಿ, ಇಲ್ಲಿಯ ರೈತರಿಗೆ ಮೋಸ ಮಾಡುತ್ತಿರುವ ಪ್ರಕ್ರಿಯೆಯನ್ನು ಖಂಡಿಸುವದಾಗಿ ಹೇಳಿದರು.
ಮಾರುಕಟ್ಟೆ ಆವರಣದಲ್ಲಿರುವ ರೈತ ಭವನ ಹೊರ ಪ್ರದೇಶದಿಂದ ತರಬೇತಿ ಅಥವಾ ಇಲ್ಲಿಯ ಕೃಷಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಆಗಮಿಸುವ ರೈತರಿಗಾಗಿ ನಿರ್ಮಿಸಲ್ಪಟ್ಟಿದೆ. ಆದರೇ ಸ್ಥಳೀಯ ಸಮಿತಿ ಅದಕ್ಕೆ ಬೀಗ ಜಡಿದಿರುವದು ಇವರ ರೈತ ಕಾಳಜಿಗೆ ಸಾಕ್ಷಿ ಆಗಿದೆ ಎಂದು ಬೆಳೆಗಾರ ಆದೇಂಗಡ ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಯಟ್ನಾಂನಿಂದ ಆಮದಾದ ಕರಿಮೆಣಸು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಸದಸ್ಯರುಗಳಿಗೆ 2 ತಿಂಗಳಾದರೂ ಅವರ ಗಮನಕ್ಕೆ ಬಾರದಿರುವದು ಹಲವು ಅನುಮಾನಕ್ಕೆ ಎಡೆಮಾಡಿದೆ. ಈ ಅಕ್ರಮ ಆಮದಿನ ವಿರುದ್ದ ರೈತ ಸಂಘವು ತಾರ್ಕಿಕ ಅಂತ್ಯದವರೆಗೆ ಕೊಂಡ್ಯೊಯ ಲಾಗುವದು. ಸ್ಥಳೀಯ ಜನಪ್ರತಿನಿಧಿಗಳು ದೊಡ್ಡ ಕಾಫಿ ಬೆಳೆಗಾರರಾಗಿದ್ದು, ಅವರು ಈ ಹೋರಾಟದಲ್ಲಿ ರೈತರ ಪರ ಕೈಜೋಡಿಸಬೇಕೆಂದು ರೈತ ಸಂಘದ ಸದಸ್ಯ ಪುಚ್ಚಿಮಾಡ ಲಾಲಾ ಪೂಣಚ್ಚ ಮನವಿ ಮಾಡಿದರು.
ಈ ಪ್ರಕರಣದ ಬಗ್ಗೆ ರೈತ ಸಂಘ ಈಗಾಗಲೇ ಎಸಿಬಿಗೆ ದೂರು ನೀಡಿದೆ ಅದರೇ ಇದು ಅಂತರರಾಜ್ಯ ಮತ್ತು ರಾಷ್ಟ್ರ ಇದರಲ್ಲಿ ಭಾಗಿಯಾಗಿರುವದರಿಂದ ಇದನ್ನು ಸಿಬಿಐ ತನಿಖೆಗೆ ಒಳಪಡಿಸುವದು ಉತ್ತಮ. ವ್ಯಾಪಾರಿ ಪರ ಇರುವ ಈ ಸಮಿತಿಯನ್ನು ಈ ಕೂಡಲೇ ಸರ್ಕಾರ ವಿಸರ್ಜಿಸಬೇಕೆಂದು ಜಿಲ್ಲಾ ರೈತ ಸಂಘದ ಮನು ಸೋಮಯ್ಯ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರ. ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಘದ ಪ್ರಮುಖರುಗಳಾದ ಅಜ್ಜಮಾಡ ಚಂಗಪ್ಪ, ಅಯ್ಯಮಾಡ ಹ್ಯಾರಿ ಸೋಮಯ್ಯ, ಬಾಚಮಾಡ ಭವಿ ಕುಮಾರ್, ಮಾಪಣಮಾಡ ಸಂಪತ್, ಅರುಮಣಮಾಡ ಸತೀಶ್, ಅದೇಂಗಡ ವಿನು, ಅಡ್ಡೇಂಗಡ ಅರುಣ, ಮಾಚಂಗಡ ಕೃಷಿ, ಅಳಮೇಂಗಡ ಸುನಿ, ಗೋಕುಲ್, ಕಾಂಡೇರ ಸುರೇಶ್, ಮಾಚಂಗಡ ಭೀಮಯ್ಯ, ಆದೇಂಗಡ ಯೋಗಿ ಹಾಜರಿದ್ದರು.
ಗೋಣಿಕೊಪ್ಪಲುವಿನಿಂದ ಕೈಕೇರಿ, ಬಿಟ್ಟಂಗಾಲ, ವೀರಾಜಪೇಟೆ, ಮೂರ್ನಾಡು, ಮೇಕೇರಿ ಮುಖಾಂತರ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಿಲ್ಲಾ ಕೇಂದ್ರ ಪ್ರವೇಶಿಸಿದ ಜಾಥಾದಲ್ಲಿ ಹತ್ತಾರು ಟ್ರ್ಯಾಕ್ಟರ್‍ಗಳು ಹಾಗೂ ಇತರ ವಾಹನಗಳಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದರು.
ಈ ವೇಳೆ ರೈತರಿಗೆ ವಂಚಿಸಿದ ವ್ಯಾಪಾರಿಗಳು, ಎಪಿಎಂಸಿ ಆಡಳಿತ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ದಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಾಂಕೇತಿಕ ಪ್ರತಿಭಟನೆಯನ್ನು ಜಿಲ್ಲಾಡಳಿತ ಅರ್ಥೈಸಿಕೊಂಡು, ನ್ಯಾಯ ಕಲ್ಪಿಸದಿದ್ದಲ್ಲಿ ಮುಂದೆ ಹೋರಾಟದ ಸ್ವರೂಪವನ್ನು ಬದಲಾಯಿಸುವದಾಗಿ ಸುಳಿವು ನೀಡಿದರು.
ಗೋಣಿಕೊಪ್ಪಲು ಎಪಿಎಂಸಿಯಲ್ಲಿ ಮಧ್ಯವರ್ತಿಯಾಗಿರುವ ವ್ಯಾಪಾರಿಗಳನ್ನು ಹೊರಹಾಕಿ ಕೊಡಗಿನ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರನ್ನು ಆಗ್ರಹಿಸಿದರು.
ಗೋಣಿಕೊಪ್ಪಲುವಿನಿಂದ ಆಗಮಿಸಿದ ಟ್ರ್ಯಾಕ್ಟರ್ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾಪ್ತಿಗೊಳಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದರು.
ರೈತ ಸಂಘದ ಮನವಿಗೆ ಸ್ಪಂದಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಈಗಾಗಲೇ ಎಸಿಬಿ ತನಿಖೆ ನಡೆಯುತ್ತಿದ್ದು, ಸಿಎಫ್‍ಟಿಆರ್‍ಐನಿಂದ ವಿಯೇಟ್ನಾಂ ಕರಿಮೆಣಸು ಗುಣಮಟ್ಟದ ಬಗ್ಗೆ ವರದಿ ಬಂದ ಬಳಿಕ ಕಾನೂನಿನಂತೆ ಕ್ರಮ ಕೈಗೊಳ್ಳುವದ ರೊಂದಿಗೆ ಕೊಡಗಿನ ರೈತರ ಹಿತ ಕಾಪಾಡಲು ಜಿಲ್ಲಾಡಳಿತ ಆಗತ್ಯ ಕ್ರಮಕ್ಕೆ ಮುಂದಾಗುವದಾಗಿ ಆಶ್ವಾಸನೆ ನೀಡಿದರು.
ಬೇಡಿಕೆಗಳು : ವಿಯೇಟ್ನಾಂ ಹಾಗೂ ಇತರ ದೇಶಗಳಿಂದ ಶ್ರೀಲಂಕಾ ಮೂಲಕ ಅತಿ ಕಡಿಮೆ ತೆರಿಗೆ ಪಾವತಿ ಮಾಡಿ, ಕರಿಮೆಣಸನ್ನು ಆಮದು ಮಾಡಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಆ ದೇಶದ ಬ್ರಾಂಡ್‍ನಲ್ಲಿ ಕಲಬೆರಕೆ ಮಾಡಿ, ಮಾರಾಟ ಮಾಡುವದರೊಂದಿಗೆ ಶೇ. 100ಕ್ಕಿಂತ ಹೆಚ್ಚು ಲಾಭಗಳಿಸುವದು. ಅಕ್ರಮ ವ್ಯವಹಾರವನ್ನು ಗೋಣಿಕೊಪ್ಪ ಆರ್.ಎಂ.ಸಿ. ಆಡಳಿತ ಮಂಡಳಿ ಸಮಗ್ರ ತನಿಖೆ ನಡೆಸಬೇಕು ಮತ್ತು ಕರಿಮೆಣಸು ವ್ಯಾಪಾರಿಗಳಾದ ಶಿವಕುಮಾರ್ ಬಂಕ (ರೋಜ್ ಮೇರಿ, ಇಂಟರ್‍ನ್ಯಾಷನಲ್), ಸೌರಭ ಕುಮಾರ್ ಬಂಕ (ಜೈ ಬಾಲಾಜಿ ಭಂಡಾರ್), ಜತ್ತೀನ್ ಶಾ (ಕಾವೇರಿ ಎಂಟರ್‍ಪ್ರೈಸಸ್) ಇವರ ಪರವಾನಿಗೆ ಯನ್ನು ಶೀಘ್ರವಾಗಿ ರದ್ದುಪಡಿಸಬೇಕು. ರೈತರಿಂದ ಚುನಾಯಿತರಾದ ಆರ್.ಎಂ.ಸಿ.ಯ ಆಡಳಿತ ಮಂಡಳಿ ಸ್ಥಳೀಯ ರೈತರ ಹಿತ ಕಾಪಾಡುವಲ್ಲಿ ಹಾಗೂ ರೈತನು ಬೆಳೆದ ಬೆಳೆಗೆ ಯೋಗ್ಯವಾದ ಬೆಲೆಯನ್ನು ಕೊಡಿಸುವಲ್ಲಿ ವಿಫಲವಾಗಿದೆ.
ವಿಯೇಟ್ನಾಂನಿಂದ ಬಂದಂತಹ ಕಾಳುಮೆಣಸನ್ನು ಮಾರಾಟ ಮಾಡುವ ಮೊದಲು ಅಥವಾ ಎ.ಪಿ.ಎಂ.ಸಿ.ಯಿಂದ ಹೊರಗೆ ಹೋಗುವ ಮುಂಚೆ ಇದನ್ನು ಮಾಧ್ಯಮಕ್ಕಾಗಲಿ ಅಥವಾ ಜನರಿಗಾಗಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರೆ ರೈತರಿಗೆ ಆಗುವಂತಹ ಅನಾನು ಕೂಲವನ್ನು ತಪ್ಪಿಸಬಹುದಾಗಿತ್ತು.
ಪರವಾನಗಿ ಪಡೆದುಕೊಂಡಿದ್ದೇವೆ ಎಂಬ ಒಂದೇ ಕಾರಣಕ್ಕಾಗಿ ಕಾನೂನನ್ನು ದುರುಪಯೋಗಪಡಿಸಿ ಕೊಂಡು, ಗೋಣಿಕೊಪ್ಪಲು ಎ.ಪಿ.ಎಂ.ಸಿ.ಯಲ್ಲಿ ಎಸ್.ಸಿ. ಎಸ್.ಟಿಗೆ ಮೀಸಲಿಟ್ಟಿದ್ದ ಮಳಿಗೆಗಳನ್ನು ಕೂಡ ದುರುಪಯೋಗಪಡಿಸಿಕೊಂಡು ಇನ್ನಿತರ ಮಳಿಗೆಗಳನ್ನು ಉಪಯೋಗಿಸಿ ಕೊಂಡಿರುವ ಬಗ್ಗೆ ಹಾಗೂ ಎ.ಪಿ.ಎಂ.ಸಿ.ಯ ಆವರಣದೊಳಗೆ ಉಪಕರಣ ಬಳಸಿ, ಕರಿಮೆಣಸು ಶುದ್ಧೀಕರಿಸುವ ಬಗ್ಗೆ ಕೂಲಂಕಷವಾದ ತನಿಖೆ ಆಗಬೇಕು.
ಒತ್ತಾಯಗಳು : ಮೇಲೆ ಕಾಣಿಸಿದ ಮೂವರು ವ್ಯಾಪಾರಿಗಳ ಎ.ಪಿ.ಎಂ.ಸಿ ಪರವಾನಿಗೆಯನ್ನು ಸುತ್ತೋಲೆ ಮುಖಾಂತರ ಕೂಡಲೇ ರದ್ದುಗೊಳಿಸ ಬೇಕು. ವಿಯೇಟ್ನಾಂನಿಂದ ಬಂದಿರುವ ಕರಿಮೆಣಸನ್ನು ಯಾವ ಮಾರ್ಗವಾಗಿ ಬಂದಿದೆ ಹಾಗೂ ಅದರ ತೆರಿಗೆ ಪಾವತಿ, ಕಲಬೆರಕೆ, ಈ ಮೂರು ಅಂಶಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಎ.ಸಿ.ಬಿ., ಸಿ.ಓ.ಡಿ. ಹಾಗೂ ಅಂತರ್ರಾಷ್ಟ್ರೀಯ ವಿಶೇಷ ತನಿಖಾ ತಂಡ ತನಿಖೆಯನ್ನು ನಡೆಸಬೇಕು. ಕಲಬೆರಕೆ ಕಾಳುಮೆಣಸಿನ ಮತ್ತು ಇತರ ತನಿಖೆಗೆ ಒಳಪಡಿಸುವ ವಸ್ತುಗಳನ್ನು ವಿವಿಧ ಇಲಾಖೆಗಳಾದಂತಹ ಸ್ಪೈಸಸ್ ಬೋರ್ಡ್, ಜಿಲ್ಲಾಧಿಕಾರಿ, ಅರಣ್ಯ ಕಾಲೇಜು, ಕೃಷಿ ವಿಜ್ಞಾನ ಕೇಂದ್ರಗಳಿಗೆ ಸ್ಯಾಂಪಲ್ ಮೆಟಿರಿಯಲ್ ಮೊಹರಾಗಿ ಇಡಬೇಕು. ಸ್ಥಳೀಯ ರೈತರು ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರ ಹಿತದೃಷ್ಟಿಗೆ ಧಕ್ಕೆ ತರದಂತಹ ಯಾವದೇ ವಾಣಿಜ್ಯ ಹಾಗೂ ಇತರ ವ್ಯವಹಾರಗಳು ಎ.ಪಿ.ಸಿ.ಎಂ.ಸಿ.ಯ ವ್ಯವಸ್ಥೆಯಲ್ಲಿ ಆಗಬಾರದೆಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ಸಂದರ್ಭ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಚೋನಿರ ಕೆ. ಸತ್ಯ, ಸಂಚಾಲಕ ಚಿಮ್ಮಂಗಡ ಗಣೇಶ್, ಪ್ರಮುಖರಾದ ಬೋಡಂಗಡ ಅಶೋಕ್, ಆದೇಂಗಡ ಅಶೋಕ್ ಮೊದಲಾದವರು ನೇತೃತ್ವ ವಹಿಸಿದ್ದರು.