ಸೋಮವಾರಪೇಟೆ,ಅ.11: ಇಲ್ಲಿನ ಮಲಂಗ್ ಷಾ ವಲಿ ಯೂತ್ ಕಮಿಟಿಯ ಅನಾಥರು ಮತ್ತು ನಿರ್ಗತಿಕರ ಸೇವಾ ಸಂಸ್ಥೆ ಆಶ್ರಯದಲ್ಲಿ ತಾ. 15ರಂದು ಸ್ಥಳೀಯ ಕೊಡವ ಸಮಾಜದಲ್ಲಿ 5ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಭಾವೈಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 15ರಂದು ನಡೆಯುವ ಉಚಿತ ಸಾಮೂಹಿಕ ವಿವಾಹ ಮತ್ತು ಭಾವೈಕ್ಯತಾ ಸಮಾವೇಶದ ನೇತೃತ್ವವನ್ನು ಪಾಣಕ್ಕಾಡ್ನ ಶಿಹಾಬ್ ತಂಙಳ್ ಜನಾಬ್ ಸಯ್ಯದ್ ರಶೀದ್ಲಿ ವಹಿಸಲಿದ್ದು, ಚಿತ್ರದುರ್ಗ ಬಸವಕೇಂದ್ರದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂತ ಜೋಸೆಫರ ಚರ್ಚ್ನ ಧರ್ಮಗುರು ಟೆನ್ನಿ ಕುರಿಯನ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಕಮಿಟಿಯ ವತಿಯಿಂದ ಕಳೆದ 4 ವರ್ಷಗಳಲ್ಲಿ 15 ಜೋಡಿ ಬಡ ಅನಾಥ ಕನ್ಯೆಯರನ್ನು ವಿವಾಹ ಮಾಡಿಕೊಡಲಾಗಿದೆ. ಪ್ರಸ್ತುತ ವರ್ಷದ ಸಾಮೂಹಿಕ ವಿವಾಹದಲ್ಲೂ ವಧುವಿಗೆ 5 ಪವನ್ ಚಿನ್ನಾಭರಣ, ಒಂದು ಜತೆ ಉಡುಪು, ವರನಿಗೆ ಉಡುಪು ಸೇರಿದಂತೆ ವಿವಾಹದ ಸಂಪೂರ್ಣ ಖರ್ಚನ್ನು ಭರಿಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಿಟಿಯ ಅಧ್ಯಕ್ಷ ಅಬ್ದುಲ್ ಅಜೀಜ್ ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ಸಕಲೇಶಪುರದ ಇಬ್ರಾಹಿಂ ಮುಸ್ಲಿಯಾರ್ ಆಗಮಿಸಲಿದ್ದಾರೆ. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ಉದ್ಯಮಿ ಹರಪಳ್ಳಿ ರವೀಂದ್ರ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಷÀಂಶುದ್ದೀನ್, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ್ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಲಂಗ್ ಷಾ ವಲಿ ಯೂತ್ ಕಮಿಟಿಯ ಉಪಾಧ್ಯಕ್ಷ ಎಂ.ಇ. ಮಹಮ್ಮದ್, ಕಾರ್ಯದರ್ಶಿ ಪಿ. ಯೂಸುಫ್ ಉಪಸ್ಥಿತರಿದ್ದರು.