ಸೋಮವಾರಪೇಟೆ,ಅ.11: ಪ.ಪಂ. ವ್ಯಾಪ್ತಿಯ ಮಹದೇಶ್ವರ ಬಡಾವಣೆಯ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಪಟ್ಟಣ ಪಂಚಾಯಿತಿ ಮುಂದಾಗಿದ್ದು, ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಬ್ಲಾಕ್‍ನ ಅಶೋಕ ನಗರದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಪಟ್ಟಣ ಪಂಚಾಯಿತಿಯಿಂದ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಈಗಾಗಲೇ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ಚರಂಡಿಯಲ್ಲಿ ಕಸ ವಿಲೇವಾರಿ ಮಾಡುತ್ತಿರುವದರಿಂದ ಸುತ್ತಲ ಪರಿಸರ ಕಲುಷಿತಗೊಳ್ಳುತ್ತಿದೆ. ಸೊಳ್ಳೆಗಳು ಹೆಚ್ಚಾಗಿವೆ. ಇಂತಹ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗಿರುವದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಬೇರೆಡೆ ಸ್ಥಳ ಗುರುತಿಸಿ ಘಟಕ ನಿರ್ಮಿಸಲು ಪಂಚಾಯಿತಿ ಮುಂದಾಗಬೇಕೆಂದು ಸಿದ್ದಿವಿನಾಯಕ ಯುವಕ ಸಂಘದ ಅಧ್ಯಕ್ಷ ಗಣೇಶ್ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗುತ್ತಿಗೆದಾರರನ್ನು ಪಂಚಾಯಿತಿ ಕಚೇರಿಗೆ ಕರೆಸಿ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಮೌಖಿಕ ಆದೇಶ ನೀಡಿದರು. ಈ ಸಂದರ್ಭ ಸ್ಥಳೀಯ ನಿವಾಸಿಗಳಾದ ಎಚ್.ಆರ್. ಗಿರೀಶ್, ಚಂದ್ರ, ಶೇಖರ್ ಪುರೋಹಿತ್, ಸತೀಶ್, ದೊರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.