ಮಡಿಕೇರಿ, ಅ. 10: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಮತ್ತು ವಸತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಹಿಂದೆ ಬಿದ್ದಿರುವದರಿಂದ ಕೊಡಗು ಜಿಲ್ಲೆಯ ಪ್ರಗತಿಯ ಅಂಕಿ ಅಂಶದಲ್ಲಿ ಕುಸಿತ ಕಂಡಿದ್ದು, ಪ್ರಗತಿ ಸಾಧಿಸದಿರುವ ಗ್ರಾ.ಪಂ.ಗಳು ಪ್ರಗತಿ ಸಾಧಿಸುವತ್ತ ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಪ್ರಭಾರ ಸಿಇಓ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗು ಜಿಲ್ಲೆ ಸ್ವಚ್ಛ ಭಾರತ ಅಭಿಯಾನದಡಿ ಉತ್ತಮ ಪ್ರಗತಿ ಸಾಧಿಸಿದೆ. ಆದರೆ ವಸತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನಾ ಕಾರ್ಯಕ್ರಮದಲ್ಲಿ ಹಲವು ಗ್ರಾ.ಪಂ.ಗಳು ಪ್ರಗತಿ ಕಾಣದಿರುವದು ಕಂಡುಬಂದಿದೆ. ಆ ನಿಟ್ಟಿನಲ್ಲಿ ಪ್ರಗತಿ ಕುಂಠಿತವಾಗಿರುವ ಗ್ರಾ.ಪಂ.ಗಳು ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಕಾಳಜಿ ವಹಿಸುವಂತೆ ನಿರ್ದೇಶನ ನೀಡಿದರು.

ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಕ್ರಿಯಾ ಶೀಲತೆಯಿಂದ ಕೆಲಸ ಮಾಡದಿರುವದು ಕಂಡುಬಂದಿದೆ. ಆದ್ದರಿಂದ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಅಭಿವೃದ್ಧಿ ಸಾಧಿಸುವತ್ತ ಹೆಚ್ಚಿನ ಗಮಮನಹರಿಸಬೇಕಿದೆ ಎಂದರು.

ವೀರಾಜಪೇಟೆ ತಾಲೂಕಿನ 17, ಸೋಮವಾರಪೇಟೆ ತಾಲೂಕಿನ 8 ಮತ್ತು ಮಡಿಕೇರಿ ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳು ಪ್ರಗತಿಯಲ್ಲಿ ಹಿಂದೆ ಉಳಿದಿವೆ. ಆದ್ದರಿಂದ ಒಂದು ತಿಂಗಳೊಳಗೆ ಪ್ರಗತಿ ಸಾಧಿಸುವಂತೆ ತಾ.ಪಂ. ಇಒಗಳು ಮತ್ತು ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ನಿವೇಶನ ಇಲ್ಲದವರಿಗೆ ನಿವೇಶನ, ವಸತಿ ಕಲ್ಪಿಸುವದು, ಅಂಗನವಾಡಿ, ಶಾಲಾ ಆಟದ ಮೈದಾನ ಒದಗಿಸುವದು, ತೆರೆದ ಬಾವಿ ತೆಗೆಯುವದು, ಅಂತರ್ಜಲ ಹೆಚ್ಚಳಕ್ಕೆ ಕ್ರಮವಹಿಸುವದು ಹೀಗೆ ಸ್ಥಳೀಯವಾಗಿ ಬೇಡಿಕೆ ಇರುವ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತವಾಗಿರುವ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಲಹೆ ಮಾರ್ಗದರ್ಶನ ಮಾಡಿ ಪ್ರಗತಿ ಸಾಧಿಸಲು ಉತ್ತೇಜನ ನೀಡುವಂತೆ ತಾ.ಪಂ. ಇಒ ಹಾಗೂ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಸೋಮವಾರಪೇಟೆ ತಾಲೂಕಿನ ಹೊಸಕೋಟೆ, ಗುಡ್ಡೆಹೊಸೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂಗ್ಲೀಷ್ ನಾಮಫಲಕಗಳು ರಾರಾಜಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಕೂಡಲೇ ಇಂಗ್ಲೀಷ್ ನಾಮಫಲಕಗಳನ್ನು ತೆರವುಗೊಳಿಸು ವಂತೆ ಪಿಡಿಒಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಈ ಸಂದರ್ಭ ಮಾತನಾಡಿದ ಜಿ.ಪಂ. ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಇಂಗ್ಲೀಷ್ ನಾಮಫಲಕ ತೆರವುಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳು ಒತ್ತಾಯ ಮಾಡುತ್ತಾ ಬಂದಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಗ್ಲೀಷ್ ನಾಮಫಲಕ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.

ತಾ.ಪಂ. ಇಒಗಳಾದ ಫೆಡ್ನೇಕರ್ (ವೀರಾಜಪೇಟೆ), ಜೀವನ್ ಕುಮಾರ್ (ಮಡಿಕೇರಿ), ಸಹಾಯಕ ನಿರ್ದೇಶಕರಾದ ಸುನೀಲ್, ಜಯಣ್ಣ ವಸತಿ, ನರೇಗಾ ಕಾರ್ಯಕ್ರಮಗಳ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಪಿಡಿಓಗಳು ಹಲವು ಮಾಹಿತಿ ನೀಡಿದರು.