ಸೋಮವಾರಪೇಟೆ, ಅ. 11: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ಕೇವಲ 12 ರೂಪಾಯಿ ವಿಮಾ ಮೊತ್ತ ಕಟ್ಟಿದ್ದ ಕುಟುಂಬಕ್ಕೆ ಇದೀಗ 2 ಲಕ್ಷ ವಿಮಾ ಹಣ ಸಿಕ್ಕಿದೆ.

ಅವಘಡದಲ್ಲಿ ಸಾವನ್ನಪ್ಪಿದ ಬಡ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ ಲಭಿಸಿದಂತಾಗಿದ್ದು, ಯೋಜನೆಯಡಿ ನೋಂದಾಯಿಸಲ್ಪಟ್ಟಿದ್ದರಿಂದ ಕೇಂದ್ರ ಸರ್ಕಾರದಿಂದ ಸಹಾಯಹಸ್ತ ದೊರೆತಿದೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ತಮ್ಮಯ್ಯ ಮತ್ತು ಸುನಂದ ದಂಪತಿಯ ಪುತ್ರ ದಿವಾಕರ್ ಕಳೆದ ಕೆಲ ತಿಂಗಳ ಹಿಂದೆ ಕಬಿನಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದ. ಇದಕ್ಕೂ ಮುನ್ನ ಇವರು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ಸ್ಥಳೀಯ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ವಾರ್ಷಿಕ ರೂ. 12 ಪ್ರೀಮಿಯಂ ಪಾವತಿಸಿದ್ದರು.

ಈ ಹಿನ್ನೆಲೆ ಮೃತರ ಕುಟುಂಬಕ್ಕೆ ರೂ. 2 ಲಕ್ಷ ವಿಮಾ ಹಣ ಬಂದಿದ್ದು, ಬ್ಯಾಂಕಿನ ವ್ಯವಸ್ಥಾಪಕ ರಘುಚಂದ್ರ ಮೃತನ ತಾಯಿ ಸುನಂದ ಅವರಿಗೆ ಹಸ್ತಾಂತರಿಸಿದರು.