ಸೋಮವಾರಪೇಟೆ,ಅ.10: ಅನೇಕ ದಶಕಗಳಿಂದಲೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಂಡು ಬರುತ್ತಿರುವ ಕಾಫಿ ಬೆಳೆಗಾರರು ಇತ್ತೀಚೆಗೆ ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಾರರ ಹಿತ ಕಾಪಾಡುವ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಬೇಕು ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ ಅಭಿಪ್ರಾಯಿಸಿದರು.ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಬೃಹತ್ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆಗಾರರು ತಮ್ಮೊಂದಿಗೆ ಕಾರ್ಮಿಕ ಕುಟುಂಬವನ್ನೂ ಸಲಹುತ್ತಾ, ನಿಜವಾದ ಸಾಮಾಜಿಕ ನ್ಯಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರಕೃತಿಯ ವಿಕೋಪ ಗಳಿಂದ ನಾನಾ ಸಮಸ್ಯೆಗಳಿಗೆ ಸಿಲುಕಿ ಇತ್ತೀಚಿಗೆ ಸರ್ಕಾರದ ಮುಂದೆ ಕೈಚಾಚುವ ಪರಿಸ್ಥಿತಿಗೆ ಬಂದಿದ್ದಾರೆ. ಈ ಹಿನ್ನೆಲೆ ಸರ್ಕಾರಗಳು ಬೆಳೆಗಾರರ ಹಿತಕಾಪಾಡಲು ಮುಂದೆಬರಬೇಕಿದೆ ಎಂದರು.

1929ರ ಸಮಯದಲ್ಲಿ ಭಾರತದ ಕಾಫಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದ್ದು, ಪ್ರಪಂಚದಲ್ಲಿಯೇ ಬೇಡಿಕೆಯುಕ್ತ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನ ಪಡೆದಿದೆ. ನಾವುಗಳು ಭೂಮಿಯ ಫಲವತ್ತತೆಯನ್ನು ಸಂರಕ್ಷಿಸಿಕೊಂಡು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು ಎಂದ ಬೋಜೇಗೌಡ ಜಿಲ್ಲೆಯ ಶನಿವಾರಸಂತೆ ಸಮೀಪದ ಬೆಳ್ಳಾರಳ್ಳಿ ಸುತ್ತಮುತ್ತ ಕಂಡುಬಂದಿರುವ ಆಫ್ರಿಕನ್ ಶಂಕುಹುಳುವಿನ ಬಾಧೆ ತಡೆಗೆ ಕಾಫಿ ಮಂಡಳಿಯಿಂದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರಿಗೆ ಮಂಡಳಿಯಿಂದ ಅಗತ್ಯ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಜಯರಾಂ ಮಾತನಾಡಿ, ಕಾಫಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಸರ್ಕಾರ ಮುಂದಾಗ ಬೇಕು ಎಂದು ಒತ್ತಾಯಿಸಿದರು.

ಕೊಡಗಿನಲ್ಲಿ 120ಕ್ಕೂ ಅಧಿಕ ಕಾಡಾನೆಗಳು

(ಮೊದಲ ಪುಟದಿಂದ) ಕೃಷಿ ಪ್ರದೇಶ ಮತ್ತು ಜನವಸತಿ ಭಾಗಗಳಲ್ಲಿ ಬೀಡುಬಿಟ್ಟಿದ್ದು, ಕಾಡಾನೆಗಳ ಉಪಟಳದಿಂದ ಬೆಳೆಗಾರರಿಗೆ ಮುಕ್ತಿ ನೀಡಬೇಕು. ಮುಂದಿನ ದಿನಗಳಲ್ಲಿ ತೋಟದಲ್ಲಿರುವ ಮರಗಳನ್ನು ಕಡಿಯಲೂ ಸಹ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾದ ಬಗ್ಗೆ ಕಾನೂನು ರಚಿಸುವ ಯತ್ನಗಳು ನಡೆಯುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಕಳೆದ 1.8.2017ರಿಂದ 29.8.2017 ರವರೆಗೆ 24 ಸಾವಿರ ಟನ್ ವಿಯೆಟ್ನಾಂ ಕರಿಮೆಣಸು ಆಮದು ಆಗಿರುವ ಬಗ್ಗೆ ದಾಖಲೆ ಲಭಿಸಿದ್ದು, ಇದು ಸ್ಥಳೀಯ ಬೆಳೆಗಾರರಿಗೆ ಮಾರಕವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಶೀಘ್ರವಾಗಿ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಿ ವಿಯೆಟ್ನಾಂ ಕರಿಮೆಣಸು ಆಮದನ್ನು ನಿರ್ಬಂಧಿಸಲು ಒತ್ತಾಯಿಸಬೇಕು ಎಂದು ಕರೆ ನೀಡಿದರು.

ರೂ. 3.52 ಕೋಟಿ ಬಿಡುಗಡೆ: ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾಪ್ರಕಾಶ್ ಮಾತನಾಡಿ, ಕಳೆದ 3 ವರ್ಷಗಳಿಂದ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಬರದೇ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೀಗ 3 ಕೋಟಿ 52ಲಕ್ಷದ 22 ಸಾವಿರ ಸಬ್ಸಿಡಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ವೀರಾಜಪೇಟೆ ಕ್ಷೇತ್ರಕ್ಕೆ 1.87 ಕೋಟಿ ಹಾಗೂ ಮಡಿಕೇರಿ ಕ್ಷೇತ್ರಕ್ಕೆ 1.57 ಕೋಟಿ ಹಣ ಮೀಸಲಿಟ್ಟಿದ್ದು, ಕಾಫಿ ಮ್ಯೂಸಿಯಂ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ಕಾಫಿ ಬೆಳೆಗಾರರ ಸಂಘದ ಸಲಹೆಗಾರ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕೆ ಸಂಘಟನಾತ್ಮಕ ಹೋರಾಟ ಅಗತ್ಯ ಎಂದರು. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಕಾಫಿ ಬೆಳೆಗಾರರಿಗೆ ಸಂಬಂಧಿಸಿದಂತೆ ಕೆಲವೊಂದು ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

ಕಾಡಾನೆಗಳ ಉಪಟಳ ಹೆಚ್ಚಾಗಿರುವದರಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಮಾವೇಶದಲ್ಲಿ ಉಪಸ್ಥಿತರಿದ್ದ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ, ಉಪಾಧ್ಯಕ್ಷೆ ರೀನಾ ಪ್ರಕಾಶ್ ಅವರುಗಳಿಗೆ ಮನವಿ ಸಲ್ಲಿಸಲಾಯಿತು.

ಸಮಾವೇಶದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ಕಾಫಿ ಮಂಡಳಿ ಸದಸ್ಯರುಗಳಾದ ಎಂ.ಬಿ. ಅಭಿಮನ್ಯುಕುಮಾರ್, ಬೊಟ್ಟಂಗಡ ರಾಜು, ಡಾಲಿ ಚಂಗಪ್ಪ, ಜಿ.ಎಲ್. ನಾಗರಾಜು, ಚಿಕ್ಕಮಗಳೂರಿನ ಮನುಕುಮಾರ್, ಉದಯಕುಮಾರ್ ಹೆಗ್ಡೆ, ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಬೆಳೆಗಾರರ ಸಂಘದ ಉಪಾಧ್ಯಕ್ಷ ಬಸಪ್ಪ, ಬಿ.ಎಂ. ಲವ, ಕಾರ್ಯದರ್ಶಿ ತಾಕೇರಿ ಪ್ರಕಾಶ್, ಪ್ರಮುಖರಾದ ಕೆ.ಎಂ. ಲೋಕೇಶ್, ಎಸ್.ಎಂ. ಡಿಸಿಲ್ವಾ, ಹೊಸಬೀಡು ಹೂವಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.