ಶ್ರೀಮಂಗಲ, ಅ. 10: ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಸಿಂಕೋನದಲ್ಲಿ ಅಕ್ರಮ ಗಾಂಜಾ ಮಾರಾಟ ಮತ್ತು ಶಾಲೆಯ ಸಮೀಪ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವದನ್ನು ವಿರೋಧಿಸಿ ಕುಟ್ಟ ಗ್ರಾ.ಪಂ. ಕಚೇರಿ ಎದುರು ವಿವಿಧ ಸಂಘ-ಸಂಸ್ಥೆಯ ಮಹಿಳೆಯರು ಪ್ರತಿಭಟನೆ ನಡೆಸಿದರು.
ಕೇರಳದ ಗಡಿ ಭಾಗದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಅಂಗನವಾಡಿ, ಪ್ರಾಥಮಿಕ ಶಾಲೆ, ಕುಟ್ಟ ಪೊಲೀಸ್ ಠಾಣೆಗೆ 700 ಮೀ. ಅಂತರದಲ್ಲಿ ಜನವಸತಿ ಪ್ರದೇಶದ ನಡುವೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಮಹಿಳೆಯರು ಒತ್ತಾಯಿಸಿದರು. ವಸತಿ ಪ್ರದೇಶದ ಸಮೀಪದಲ್ಲಿಯೇ ಮದ್ಯದಂಗಡಿಗೆ ಅವಕಾಶ ನೀಡಿದರೆ ಇಲ್ಲಿ ಮದ್ಯಸೇವನೆಗೆ ಬರುವ ಜನರಿಂದ ಜನಜಂಗುಳಿ ಉಂಟಾಗುತ್ತದೆ. ನಿಶಾಮತ್ತರಾಗಿ ಅಹಿತಕರ ಘಟನೆಗೆ ಕಾರಣವಾಗಲಿದೆ. ಈಗಾಗಲೇ ಕೇರಳ-ಕರ್ನಾಟಕದ ಗಡಿ ಪ್ರದೇಶವಾಗಿರುವ ವಯನಾಡು ವ್ಯಾಪ್ತಿಯಲ್ಲಿ ನಕ್ಸಲರ ಸಂಚಾರ ಪತ್ತೆಯಾಗಿದೆ. ಇಲ್ಲಿ ಮದ್ಯದಂಗಡಿ ತೆರೆಯುವದರಿಂದ ನಕ್ಸಲರ ಚಲನ ವಲನ ಹೆಚ್ಚಾಗುವ ಅಪಾಯವಿದೆ. ಗಡಿ ಭಾಗದಲ್ಲಿ ಮದ್ಯದಂಗಡಿ ಆರಂಭವಾದರೆ ವಸತಿ ಪ್ರದೇಶದ ನೆಮ್ಮದಿಗೆ ಭಂಗವಾಗಲಿದೆ ಎಂದು ಮಹಿಳೆಯರು ಪ್ರತಿಭಟನೆಯ ಸಂದರ್ಭ ದೂರಿದರು.
ಅಹವಾಲು ಸ್ವೀಕರಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಹೆಚ್.ವೈ. ರಾಮಕೃಷ್ಣ, ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿಗೆ ಪ್ರತಿಭಟನಾಕಾರರು ಲಿಖಿತ ಮನವಿ ಸಲ್ಲಿಸಿದ್ದಾರೆ. ಇದನ್ನು ಸಾಮಾನ್ಯ ಸಭೆಯಲ್ಲಿ ಪರಿಶೀಲಿಸಿ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮದ್ಯದಂಗಡಿಗೆ ಅವಕಾಶ ನೀಡದಂತೆ ನಿರ್ಣಯ ಕೈಗೊಂಡಿರುವ ಪತ್ರವನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಅಬಕಾರಿ ನೀರಿಕ್ಷಕ ಲಕ್ಷ್ಮೀಶ್ ಅವರನ್ನು ವಿವರಣೆ ಕೇಳಿದಾಗ ಪಾಲಿಬೆಟ್ಟದ ಮದ್ಯದಂಗಡಿಯನ್ನು ಕುಟ್ಟಕ್ಕೆ ಸ್ಥಳಾಂತರ ಮಾಡುತ್ತಿದ್ದು, ಸ್ಥಳಾಂತರಕ್ಕೆ ಗ್ರಾ.ಪಂ. ಅನುಮತಿ ಬೇಕಿಲ್ಲ ಎಂದು ವಿವರಣೆ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಂಕೋನ ಗ್ರಾಮದ ಪ್ರಾಥಮಿಕ ಶಾಲೆ ಹಿಂಬದಿಯಲ್ಲಿ ದಿನನಿತ್ಯ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಈ ವ್ಯಾಪ್ತಿಯ ನೂರು ಜನರಲ್ಲಿ 90 ಮಕ್ಕಳು ಗಾಂಜಾ ಸೇವಿಸುತ್ತಿದ್ದಾರೆ. ಗಾಂಜಾ ಸೇವನೆಗಾಗಿ ಹಾಗೂ ಗಾಂಜಾ ಖರೀದಿಸಲು ಅಪರಿಚಿತರು ಹಗಲು-ರಾತ್ರಿಯೆನ್ನದೆ ಬರುತ್ತಿದ್ದಾರೆ. ಇದನ್ನು ಪೊಲೀಸರು ತಡೆಗಟ್ಟಲು ಸಾಧ್ಯವಾಗದಿದ್ದರೆ ಮಹಿಳೆಯರಾದ ನಾವೇ ತಡೆಗಟ್ಟಲು ಮುಂದಾಗುತ್ತೇವೆಂದು ಎಚ್ಚರಿಸಿದರು. ಕುಟ್ಟ ಪೊಲೀಸ್ ಉಪನಿರೀಕ್ಷಕ ಡಿ. ಕುಮಾರ್ ಅವರಿಗೆ ಗಾಂಜಾ ಮಾರಾಟ ಹಾಗೂ ಮದ್ಯದಂಗಡಿ ಬಗ್ಗೆ ಮಹಿಳೆಯರು ಮನವಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಸಿಂಕೋನ ವಾರ್ಡ್ ಗ್ರಾ.ಪಂ. ಸದಸ್ಯರಾದ ಪಿ.ಕೆ. ಅರುಣ್ ಕುಮಾರ್, ಪಿ.ಜೆ. ಅಯ್ಯಪ್ಪ, ಸುನಿತ, ಮೈಮುನ್ನೀಸಾ ಮತ್ತಿತರರು ಭಾಗವಹಿಸಿದ್ದರು.