ಮಡಿಕೇರಿ, ಅ. 11: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ, ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಅವರು ಪ್ರತಿಯೊಬ್ಬ ಮನುಷ್ಯನಿಗೂ ಹಾಗೂ ಜೀವ ಸಂಕುಲಕ್ಕೂ ಮಾನಸಿಕ ಮತ್ತು ದೈಹಿಕವಾಗಿ ಎರಡು ರೀತಿಯ ಮನೋಸ್ಥಿತಿ ಇದೆ. ಅದರಲ್ಲಿ ಮಾನಸಿಕ ಆರೋಗ್ಯವು ದೇಹವನ್ನು ನಿಯಂತ್ರಣ ಮಾಡುತ್ತದೆ. ಶಾರೀರಿಕ ಖಾಯಿಲೆಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು. ಸದಾ ಸಂತೋಷದಿಂದ ಇರಲು ಚಿಂತೆಯಿಂದ ದೂರವಿರಬೇಕು ಮತ್ತು ಮನಸ್ಸನ್ನು ಪರಿಣಾಮಕಾರಿಯಾಗಿ ಆರೋಗ್ಯವಾಗಿ ಇಟ್ಟುಕೊಂಡು ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮನೋವೈದ್ಯ ಡಾ. ಡೇವಿನ್ ಲಿನೆಕರ್ ಕರ್ಕಡ ಉಪನ್ಯಾಸ ನೀಡಿ ವಿಶ್ವ ಆರೋಗ್ಯ ಸಂಸ್ಥೆಯ 2017ರ ಘೋಷವಾಕ್ಯ ‘ಕಾರ್ಯಸ್ಥಳದಲ್ಲಿ ಮಾನಸಿಕ ಆರೋಗ್ಯ” ಎಂಬದಾಗಿದೆ. ಜೀವನದ ಬಗ್ಗೆ ಉಲ್ಲಾಸ ದಿನೇ ದಿನೇ ಕಡಿಮೆಯಾಗುತ್ತದೆ ಎಂದು ಅವರು ವಿಷಾದಿಸಿದರು.

ಮಾನಸಿಕ ಆರೋಗ್ಯಕ್ಕೆ ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಕಾರ್ಯ ಸ್ಥಳದಲ್ಲಿ ಬೇರೆಯವರ ಬಗ್ಗೆ ಅಸೂಯೆ ಪಡುವಂತಹ ಪ್ರವೃತ್ತಿಯಿಂದ ದೂರವಿರಬೇಕು ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ಆರೋಗ್ಯವೇ ಭಾಗ್ಯ ಎಂಬ ಶ್ರೀಮಂತಿಕೆಯನ್ನು ಗಳಿಸಿ ಮಾನಸಿಕ ದೈಹಿಕ, ಸಾಮಾಜಿಕ ಸದೃಢತೆಯಿಂದ ಕೂಡಿರಬೇಕು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕ ನಂದೀಶ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.