ವೀರಾಜಪೇಟೆ, ಅ.11: ಕೊಡವರ ಆಚಾರ ವಿಚಾರಗಳು ಸಂಸ್ಕøತಿ ಪದ್ಧತಿಯನ್ನು ಕೊಡವ ಸಾಹಿತ್ಯದ ಮೂಲಕ ಕೊಡವ ಸಮುದಾಯಕ್ಕೆ ಪರಿಚಯಿಸಿದ ಮೊದಲ ಹಾಗೂ ಮೇಲ್ಪಂಕ್ತಿಯ ಮಹಾ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಎಂದು ಗೋಣಿಕೊಪ್ಪಲಿನ ಡಾ. ಕಾಳಿಮಾಡ ಕೆ.ಶಿವಪ್ಪ ಹೇಳಿದರು.ವೀರಾಜಪೇಟೆಯ ಅಖಿಲ ಕೊಡವ ಸಮಾಜ ಹಾಗೂ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹರದಾಸ ಅಪ್ಪಚ್ಚ ಕವಿಯ 150ನೇ ಜಯಂತ್ಯುತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಪ್ಪ ಅವರು ಮಹಾಭಾರತವನ್ನು ರಚಿಸಿದ ಮಹಾ ಕವಿ ಕುಮಾರ ವ್ಯಾಸರಂತೆ ಹರಿದಾಸ ಅಪ್ಪಚ್ಚ ಕವಿ ಗೀತ ನಾಟಕಗಳು, ಕೊಡವ ಸಾಹಿತ್ಯವನ್ನು ರಚಿಸಿ 19ನೇ ಶತಮಾನದಲ್ಲಿ ಹೆಸರುವಾಸಿಯಾದ ಕವಿಯಾಗಿದ್ದರು ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ. ಸಿ. ಮೊಣ್ಣಪ್ಪ ಪ್ರಾಸ್ತವಿಕವಾಗಿ ಮಾತನಾಡಿ 19ನೇ ಶತಮಾನದ ಕೊಡವ ಸಾಹಿತ್ಯದ ಆದ್ಯ ಕವಿ ಎಂದು ಹೆಸರಾಗಿರುವ ಅಪ್ಪಚ್ಚ ಕವಿಯ ಎಲ್ಲ ಸಾಹಿತ್ಯಗಳು, ಗೀತಾ ನಾಟಕಗಳು,

(ಮೊದಲ ಪುಟದಿಂದ) ಕವಿತೆಗಳನ್ನು ಶಾಶ್ವತವಾಗಿ ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಕೊಡಗಿನಲ್ಲಿ ನಿರಂತರವಾಗಿ ನಡೆಯಬೇಕು ಎಂದರು.

ಬರಹಗಾರರು, ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಮಾತನಾಡಿ ಹರದಾಸ ಅಪ್ಪಚ್ಚಕವಿ ಅವರು ಕೊಡವ ಭಾಷೆಯಲ್ಲಿ 477 ಗೀತಾ ನಾಟಕಗಳನ್ನು ರಚಿಸಿ ಖ್ಯಾತರಾಗಿದ್ದಾರೆ. ಇವರ ಕವಿತೆ, ಸಾಹಿತ್ಯಗಳು ಹಾಗೂ ಗೀತಾ ನಾಟಕಗಳು ಇಂದಿನ ಮಕ್ಕಳು, ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ಟಿ. ನಾಣಯ್ಯ ಅವರು ಮಾತನಾಡಿ ಶತಮಾನದಿಂದಲೇ ಜನಾನುರಾಗಿಯಗಿರುವ ಖ್ಯಾತ ಕವಿ ಹರದಾಸ ಅಪ್ಪಚ್ಚ ಅವರ ಹೆಸರನ್ನು ಇಲ್ಲಿನ ದೊಟ್ಟಟ್ಟಿ ಚೌಕಿಗೆ, ಮಡಿಕೇರಿಯ ಗ್ರಂಥಾಲಯ, ನಾಪೋಕ್ಲು ಪದವಿ ಕಾಲೇಜಿಗೆ ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಕೊಡವ ಅಧ್ಯಯನ ಪೀಠಕ್ಕೆ ಹರದಾಸ ಅಪ್ಪಚ್ಚ ಕವಿ ಅವರ ನಾಮಕರಣ ಮಾಡಲು ಮನವಿ ಸಲ್ಲಿಸಲಾಗುವದು. ಇದು ತಕ್ಷಣ ಕಾರ್ಯ ರೂಪಕ್ಕೆ ಬರುವಂತೆ ಕ್ರಮ ಕೈಗೊಳ್ಳಲಾಗವದು ಎಂದು ಹೇಳಿದರು.

ವೇದಿಕೆಯಲ್ಲಿ ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಇಟ್ಟೀರ ಬಿದ್ದಪ್ಪ, ಅಪ್ಪಚ್ಚ ಕವಿ ಜಯಂತಿ ಸಮಿತಿಯ ಸಂಚಾಲಕ ಅಡ್ಡಂಡ ಸಿ.ಕಾರ್ಯಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಪ್ಪಚ್ಚಕವಿ ಲಾಂಛನವನ್ನು ಕುಶಾಲನಗರಕ್ಕೆ ಹಸ್ತಾಂತರಿಸಲಾಯಿತು. ಇದೇ ಸಮಾರಂಭದಲ್ಲಿ ಅಪ್ಪಚ್ಚ ಕವಿ ಹೆಸರಿನಲ್ಲಿ, ಸಾಹಿತಿಗಳಾದ ಶತಾಯುಷಿ ಪರದಂಡ.ಜಿ.ಚಂಗಪ್ಪ, ಡಾ:ಕಾಳಿಮಂಡ ಕೆ.ಶಿವಪ್ಪ, ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಇವರುಗಳನ್ನು ಅತಿಥಿಗಳು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅಪ್ಪಚ್ಚ ಕವಿ ಅವರು ರಚಿಸಿದ ಗೀತೆಗಳನ್ನು ಎಂ.ಸಂಜು ಹಾಡಿದರು.

ಅಪ್ಪಚ್ಚ ಕವಿ ಜಯಂತಿಗೆ ಮಡಿಕೇರಿ, ಮೂರ್ನಾಡು, ನಾಪೋಕ್ಲು ಕೊಡವ ಸಮಾಜಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾರಂಭದ ಮಧ್ಯೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾರಂಭದಲ್ಲಿ ಕೊಡವ ಸಮಾಜದ ಗೌ: ಕಾರ್ಯದರ್ಶಿ ಕುಲ್ಲಚಂಡ ಜಯ ಪೂಣಚ್ಚ ಸ್ವಾಗತಿಸಿದರು. ಮಾಳೇಟಿರ ಶ್ರೀನಿವಾಸ್ ನಿರೂಪಿಸಿದರು. ಮೇವಡ ಚಿಣ್ಣಪ್ಪ ವಂದಿಸಿದರು.

ಮೆರವಣಿಗೆ: ಇಲ್ಲಿನ ದೊಡ್ಡಟ್ಟಿ ಚೌಕಿಯಲ್ಲಿರುವ ಅಪ್ಪಚ್ಚ ಕವಿ ಪ್ರತಿಮೆಗೆ ಸ್ಥಾಪಕ ಸಮಿತಿ ಅಧ್ಯಕ್ಷ ಶಂಕರಿ ಪೊನ್ನಪ್ಪ ಅವರು ಹೂವಿನ ಹಾರ ಹಾಕಿ ನಮನ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೊಡವ ಸಮುದಾಯ ಬಾಂಧವರು ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿದ್ದರು. ಮೆರವಣಿಗೆ ಮುಖ್ಯ ಬೀದಿಗಳ ಮಾರ್ಗವಾಗಿ ಬೆಳಿಗ್ಗೆ 10-30ಗಂಟೆಗೆ ಕೊಡವ ಸಮಾಜ ಸೇರಿತು.