ಗೋಣಿಕೊಪ್ಪಲು, ಅ. 11: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಬಿ ಡಿವಿಶನ್ ಹಾಕಿ ಲೀಗ್‍ನಲ್ಲಿ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಬ್ಲೂಸ್ಟಾರ್ ಪೊದ್ದ್‍ಮಾನಿ, ಮಲೆನಾಡ್ ಅಸೋಸಿಯೇಷನ್, ಮರ್ಕರಾ ಯುನೈಟೆಡ್ ಹಾಕಿ ಹಾಗೂ ಕೂಡಿಗೆ ತಂಡಗಳು ಜಯ ಸಾಧಿಸಿದವು. ಡ್ರಿಬ್‍ಲ್ ಹೆಂಪ್ ಹಾಗೂ ವೀರಾಜಪೇಟೆ ಕೊಡವ ಸಮಾಜ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡವು ಟಾಟಾ ಕಾಫಿ ವಿರುದ್ದ 2-0 ಗೋಲುಗಳ ಜಯ ಸಾಧಿಸಿತು. ವಿಜೇತ ತಂಡದ ಪರ ದರ್ಶನ್ ಪೊನ್ನಣ್ಣ, ವಿಕಾಸ್ ಗೋಲು ಹೊಡೆದರು. ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ ತಂಡವು ಗುಂಡಿಯತ್ ಅಯ್ಯಪ್ಪ ತಂಡವನ್ನು 5-3 ಗೋಲುಗಳಿಂದ ಮಣಿಸಿತು. ಅಮ್ಮತ್ತಿ ಪರ ಬಿದ್ದಪ್ಪ 2, ವೇಣು, ಸಜಿತ್, ಬೋಪಣ್ಣ, ಗುಂಡಿಯತ್ ಅಯ್ಯಪ್ಪ ಪರ ಅಪ್ಪಚ್ಚು 2, ಪೆಮ್ಮಯ್ಯ ಗೋಲು ಹೊಡೆದರು.

ಪೊದ್ದ್‍ಮಾನಿ ಬ್ಲೂಸ್ಟಾರ್ ತಂಡವು ಕಿರುಂದಾಡ್ ವಿರುದ್ದ 3-0 ಗೋಲುಗಳಿಂದ ಗೆಲುವು ಪಡೆಯಿತು. ಬ್ಲೂಸ್ಟಾರ್ ಪರ ಸುಬ್ಬಯ್ಯ, ಶ್ಯಾಂ, ಮಧು ಗೋಲು ಹೊಡೆದರು. ಮಲೆನಾಡ್ ಅಸೋಸಿಯೇಷನ್ ತಂಡವು ಬೇರಳಿನಾಡ್ ಯುನೈಟೆಡ್ ಸ್ಪೋಟ್ಸ್ ಕ್ಲಬ್ ವಿರುದ್ದ 3-2 ಗೊಲುಗಳ ಗೆಲುವು ದಾಖಲಿಸಿತು. ಬೇರಳಿನಾಡ್ ಪರ ಚಿಟ್ಯಪ್ಪ, ವರುಣ್, ಮಲೆನಾಡ್ ಪರ ನೀಲ್, ಆದರ್ಶ್ 2 ಗೋಲು ಹೊಡೆದರು.

ಮರ್ಕರಾ ಯುನೈಟೆಡ್ ಹಾಕಿ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಜೂನಿಯರ್ ತಂಡವನ್ನು 6-0 ಗೋಲುಗಳ ಮೂಲಕ ಮಣಿಸಿತು. ಮರ್ಕರಾ ಪರ ಫೈಜಲ್, ಸುಬ್ಬಯ್ಯ, ಶರಣ್, ಬಿದ್ದಪ್ಪ 3 ಗೊಲು ಹೊಡೆದು ಮಿಂಚಿದರು. ಎಸ್. ಎಸ್. ಕೂಡಿಗೆ ತಂಡವು ಬಲಮುರಿ ವಿರುದ್ದ 5-0 ಗೋಲುಗಳ ಭರ್ಜರಿ ಗೆಲುವು ಪಡೆಯಿತು. ಕೂಡಿಗೆ ಪರ ಸಿದ್ದಪ್ಪ, ಚೇತನ್ 3 ಗೋಲು, ಹರ್ಷ 1 ಗೋಲು ಹೊಡೆದರು.

ಡ್ರಿಬ್‍ಲ್ ಹೆಂಪ್ ಹಾಗೂ ವೀರಾಜಪೇಟೆ ಕೊಡವ ಸಮಾಜ ತಂಡಗಳ ನಡುವಿನ ಪಂದ್ಯ ರೋಚಕ ಟೈಯಲ್ಲಿ ಅಂತ್ಯವಾಯಿತು. ಡ್ರಿಬ್‍ಲ್ ಪರ ರವಿ, ವೀರಾಜಪೇಟೆ ಪರ ತಿಮ್ಮಯ್ಯ ಗೋಲು ಹೊಡೆದರು.

ಉದ್ಘಾಟನೆ : ಟೂರ್ನಿಯನ್ನು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗುಮ್ಮಟ್ಟೀರ ಕಿಲನ್ ಗಣಪತಿ ಉದ್ಘಾಟಿಸಿದರು. ಈ ಸಂದರ್ಭ ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ, ಕ್ರೀಡಾಕೂಟ ಆಯೋಜನಾ ಸಮಿತಿ ನಿರ್ದೇಶಕ ಬುಟ್ಟಿಯಂಡ ಚೆಂಗಪ್ಪ, ಕ್ರೀಡಾಕೂಟ ನಿರ್ದೇಶಕ ನೆಲ್ಲಮಕ್ಕಡ ಪವನ್ ಉಪಸ್ಥಿತರಿದ್ದರು.