ಸೋಮವಾರಪೇಟೆ, ಅ. 10: ನಾಡಿನ ಸಂಸ್ಕøತಿ, ಆಚಾರ-ವಿಚಾರಗಳ ಉಳಿವಿನಲ್ಲಿ ಮಠ ಮಾನ್ಯಗಳ ಪಾತ್ರ ಅನನ್ಯ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು.
ಇಲ್ಲಿನ ಎಸ್ಜೆಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ಗುರುಕುಮಾರ ಶಿವಯೋಗಿಗಳ 150ನೇ ಜನ್ಮ ಜಯಂತೋತ್ಸವದ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಿಟಿಷರ ಆಳ್ವಿಕೆಯ ನಂತರ ಮಿಷನರಿ ಶಾಲೆಗಳ ಏಕಸ್ವಾಮ್ಯವಿದ್ದ ಸನ್ನಿವೇಶದಲ್ಲಿ ಮಠ ಮಾನ್ಯಗಳ ಸಂತರು, ಸಾಧುಗಳು ಹಾಗೂ ಮಠಾಧೀಶರುಗಳ ದೂರದೃಷ್ಟಿಯ ಚಿಂತನೆಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪರಿಣಾಮ ಈ ನಾಡಿನ ಸಂಸ್ಕøತಿ, ಆಚಾರ ವಿಚಾರಗಳು ನಾಶವಾಗದೆ ಉಳಿದುಕೊಂಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾರಾಷ್ಟ್ರದ ಅಂಕಲಕೋಟೆಯ ಪೀಠಾಧಿಪತಿ ಚನ್ನಬಸವದೇವ ಸ್ವಾಮೀಜಿ, ಮೇಲ್ವರ್ಗಕ್ಕೆ ಮೀಸಲಿದ್ದ ಶಿಕ್ಷಣ, ಸಾಮಾಜಿಕ ನ್ಯಾಯವನ್ನು ಬಡವರ ಮನೆಗೆ ತಲುಪಿಸಿದ ಕೀರ್ತಿ ಹಾನಗಲ್ಲ ಗುರುಕುಮಾರ ಶಿವಯೋಗಿ ಗಳಿಗೆ ಸಲ್ಲಬೇಕು ಎಂದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ವಿರಕ್ತಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ ವಹಿಸಿ ಮಾತನಾಡಿ, ನಿಸ್ವಾರ್ಥ ಸೇವೆಯಿಂದ ಪರೋಪಕಾರ ಕ್ಕಾಗಿ ಜೀವನವನ್ನು ಮುಡಿಪಾಗಿಡ ಬೇಕು. ಇದರೊಂದಿಗೆ ಆಧ್ಯಾತ್ಮ ಚಿಂತನೆಗಳನ್ನು ಮೈಗೂಡಿಸಿ ಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗಸ್ವಾಮೀಜಿ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಜೇಸಿ ಸಂಸ್ಥೆಯ ಪದಾಧಿಕಾರಿ ಗಿರೀಶ್ ಉಪಸ್ಥಿತರಿದ್ದರು.