ಶ್ರೀಮಂಗಲ, ಅ. 12: ಮನುಷ್ಯ ಆರೋಗ್ಯಯುತವಾಗಿರಲು ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗ ತಡೆಗಟ್ಟಬಹುದೆಂದು ಕುಟ್ಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿಟ್ಟಿಯಂಡ ಅರ್ಜುನ್ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ತಾಲೂಕು ಆಶ್ರಯದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಮನುಷ್ಯನ ದೇಹದಲ್ಲಿನ ಅನಾರೋಗ್ಯಕ್ಕೆ ಅಗತ್ಯಕ್ಕೆ ಮೀರಿ ಔಷಧಿಗಳನ್ನು ತೆಗೆದುಕೊಳ್ಳುತ್ತಾ ಹೋದರೆ ಮುಂದಿನ ದಿನಗಳಲ್ಲಿ ಯಾವದೇ ಔಷಧಿಗಳು ಕೆಲಸ ಮಾಡದೇ ಇರಬಹುದು. ಆದ್ದರಿಂದ ರೋಗ ಬರದಂತೆ ಮುಂಜಾಗರೂಕತೆ ವಹಿಸುವದು ಒಳ್ಳೆಯದು ಎಂದರು.
ವೇದಿಕೆಯಲ್ಲಿ ಚರ್ಚ್ನ ಫಾದರ್ ರೆವರೆಂಟ್ ಪ್ರಸಾದ್, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಸಮನ್ವಯಾಧಿಕಾರಿ ಸ್ವಪ್ನ, ಸೇವಾ ಪ್ರತಿನಿಧಿ ಹೇಮಾವತಿ ಹಾಜರಿದ್ದರು. ನೀಲಕಂಠ ಸಂಘದ ಸದಸ್ಯೆ ಬಿ.ಎಸ್. ಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ವಿ.ಜೆ. ಪುಷ್ಪ ಸ್ವಾಗತಿಸಿ, ಸೌಮ್ಯ ವಂದಿಸಿದರು.