ಸೋಮವಾರಪೇಟೆ, ಅ. 12: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ವ್ಯಕ್ತಿಯೋರ್ವರು ಪ್ರಯತ್ನಿಸುತ್ತಿದ್ದು, ಇಲ್ಲಿ ಮದ್ಯದಂಗಡಿಗೆ ಯಾವದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸ್ಥಳೀಯ ನಿವಾಸಿಗಳು, ಕೊಡ್ಲಿಪೇಟೆ ಹೋಬಳಿ ಕಂದಾಯ ನಿರೀಕ್ಷಕರ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಕೊಡ್ಲಿಪೇಟೆಯ 1ನೇ ವಿಭಾಗದಲ್ಲಿರುವ ವೀರಭದ್ರೇಶ್ವರ ದೇವಾಲಯ ರಸ್ತೆಯಲ್ಲಿ ವ್ಯಕ್ತಿಯೋರ್ವರು ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರದೇಶ ಜನವಸತಿ ಸ್ಥಳವಾಗಿದ್ದು, ಸುತ್ತಮುತ್ತಲಲ್ಲಿ ಬಸವೇಶ್ವರ ದೇವಾಲಯ, ವೀರಭದ್ರೇಶ್ವರ ದೇವಾಲಯ, ಶ್ರೀರಾಮಲಿಂಗ ಚೌಡೇಶ್ವರಿ ದೇವಾಲಯ, ಬಸವೇಶ್ವರ ಕಲ್ಯಾಣ ಮಂಟಪ, ಅಂಗನವಾಡಿ ಕೇಂದ್ರ, ಪ್ಲೇ ಹೋಂ, ಧರ್ಮಸ್ಥಳ ಸ್ವಸಹಾಯ ಸಂಘಗಳ ಪ್ರಧಾನ ಕಚೇರಿ ಒಳಗೊಂಡ ಪ್ರದೇಶವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳೂ ಸಹ ಇದೇ ಮಾರ್ಗವಾಗಿ ಸಂಚರಿಸಬೇಕಿದೆ. ಇಂತಹ ಸ್ಥಳದಲ್ಲಿ ಮದ್ಯದಂಗಡಿ ಬೇಡ ಎಂದು ಸ್ಥಳೀಯರು ಒತ್ತಾಯಿಸಿದರು.
ಈ ಹಿಂದೆ 27.09.2017ರಂದು ಮದ್ಯದಂಗಡಿ ವಿರೋಧಿಸಿ ಕಂದಾಯ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸ್ಥಳ ಪರಿಶೀಲನೆ ನಡೆಸಿಲ್ಲ. ಯಾವದೇ ಮಾಹಿತಿಯನ್ನೂ ನೀಡಿಲ್ಲ. ಈ ಮಧ್ಯೆ ಕಟ್ಟಡದ ಕೆಲಸ ಕಾಮಗಾರಿ ನಡೆಯುತ್ತಿದ್ದು, ತಕ್ಷಣ ತಡೆಯೊಡ್ಡಬೇಕು. ಮುಂದೊಂದು ದಿನ ಮದ್ಯದಂಗಡಿ ತೆರೆಯಲು ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಕೆ.ಎಸ್. ನಾಗರಾಜು, ಬಿ.ಕೆ ಯತೀಶ್, ಮಲ್ಲಳ್ಳಿ ನಾಗೇಶ್, ಮಮತ ಸತೀಶ್, ವೀಣಾ, ಲಾವಣ್ಯ, ಚಂದ್ರಾವತಿ, ರುದ್ರಪ್ಪ, ಮಲ್ಲಿಕಾರ್ಜುನ, ಕ್ಯಾತೆ ಶಿವಕುಮಾರ್ ಸೇರಿದಂತೆ ಮಹಿಳಾ ಸಂಘಟನೆಗಳ ಕಾರ್ಯಕರ್ತರು, ಸ್ಥಳೀಯರು ಭಾಗವಹಿಸಿದ್ದರು.