ಗೋಣಿಕೊಪ್ಪಲು, ಅ. 12: ತಾಲೂಕಿನಲ್ಲಿ ಮದ್ಯದಂಗಡಿಗಳು ಪೂರ್ಣವಾಗಿ ತೆರೆಯದ ಕಾರಣ ತೆರಿಗೆ ಸಂಗ್ರಹದಲ್ಲಿ ಇಲಾಖೆಗೆ ಹಿನ್ನೆಡೆಯಾಗಿದೆ ಎಂದು ಅಬಕಾರಿ ಇಲಾಖಾಧಿಕಾರಿ ಮಾಹಿತಿ ನೀಡಿದರು.

ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ತಾ.ಪಂ. ಕೆಡಿಪಿ ಸಭೆಯಲ್ಲಿ ಅವರು ಮಾಹಿತಿ ನೀಡಿ, ತಾಲೂಕಿನಲ್ಲಿ ಈಗಾಗಲೇ 67 ಮದ್ಯದಂಗಡಿಗಳು ತೆರೆದಿದ್ದು, 13 ಅಂಗಡಿಗಳು ಬಾಕಿ ಉಳಿದಿದೆ. 7 ಅಂಗಡಿಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. ಮಾಸಿಕವಾಗಿ 48 ಸಾವಿರ ಗುರಿ ಸರ್ಕಾರ ನೀಡಿತ್ತಾದರೂ 31 ಸಾವಿರ ಮಾತ್ರ ಸಂಗ್ರಹವಾಗಿದೆ. ಇದರಿಂದ ಇಲಾಖೆಗೆ ರೂ. 17 ಸಾವಿರ ನಷ್ಟದೊಂದಿಗೆ ಹಿನ್ನೆಡೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 18 ಅಕ್ರಮ ಮಾರಾಟ ಪ್ರಕರಣಗಳು ದಾಖಲಾಗಿದೆ. 1 ಪ್ರಕರಣದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಶಿಶು ಮರಣ ಪ್ರಕರಣದಲ್ಲಿ ಶೇಕಡ 60 ರಷ್ಷು ಪ್ರಕರಣಗಳು ವೀರಾಜಪೇಟೆ ತಾಲೂಕಿನಲ್ಲಿ ನಡೆಯುತ್ತಿದೆ. ತಾಲೂಕಿನ ಶಿಶು ಮರಣ ಕಾನೂರು ಮತ್ತು ಬಾಳಲೆ ವ್ಯಾಪ್ತಿಯಲ್ಲಿ ಅಧಿಕವಾಗಿದ್ದು, ಆ ಭಾಗದಲ್ಲಿ ಹೆಚ್ಚು ಗಿರಿಜನರು ಇರುವದರಿಂದ ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೆ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಆಶಾ ಕಾರ್ಯಕರ್ತರನ್ನು ನೇಮಿಸಿಕೊಂಡು ಶಿಬಿರಗಳನ್ನು ನಡೆಸಿ ಯಾವ ಸಮಯ ದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಜಾಗೃತಿ ಮೂಡಿಸಲಾಗುವದು ಎಂದರು.

ಕೃಷಿ ಇಲಾಖೆಯಿಂದ ಈಗಾಗಲೇ ಸಸ್ಯ ಸಂರಕ್ಷಣಾ ಕೀಟೌಷಧಿ ವಿತರಣೆ ಮಾಡಲಾಗಿದೆ. ಕಳಪೆ ಟಾರ್ಪಲ್ ವಿತರಣೆ ಬಗ್ಗೆ ಬಂದಿರುವ ಆರೋಪದಂತೆ ಗುಣಪಟ್ಟ ಪರೀಕ್ಷಿಸಲು ಇಲಾಖೆ ಮುಂದಾಗಿದೆ. ವೈಜ್ಞಾನಿಕವಾಗಿ ಪರೀಕ್ಷಿಸಲು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ತಿಳಿಸಿದರು.

ಜಾನುವಾರು ಹಾಗೂ ಸಾಕು ಪ್ರಾಣಿಗಳಿಗೆ ಬರುತ್ತಿರುವ ರೋಗಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ದೊಡ್ಡ ಮಾದರಿ ಜೀವಕ್ಕೆ ಅಪಾಯವಾಗುವ ರೋಗಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ಹೇಳಿದರು.

ಉಪಾಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ಶಾಲೆಗಳ ಜಾಗಗಳ ದಾಖಲಾತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಬಹಳಷ್ಟು ಕಡೆಗಳಲ್ಲಿ ಹಕ್ಕು ಪತ್ರ ವಿತರಣೆಯಾಗದೆ ತೊಂದÀರೆ ಎದುರಿಸುತ್ತಿದ್ದಾರೆ. ಬಿರುನಾಣಿ ವ್ಯಾಪ್ತಿಯಲ್ಲಿ ಸಾಕಷ್ಟು ಜನರಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ. ಇಲಾಖಾ ಸಿಬ್ಬಂದಿ ಮಾಡುವ ತಪ್ಪಿಗೆ ಜನರು ಕಷ್ಟ ಅನುಭವಿಸಬೇಕಾಗಿದೆ ಈ ಬಗ್ಗೆ ಗಮನ ಹರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆಯಿಂದ 2 ಲಕ್ಷ ಮೀನು ಮರಿಗಳನ್ನು ಕೃಷಿಕರಿಗೆ ವಿತರಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿ ತಿಳಿಸಿದರು. ಸಭೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ತಹಶೀಲ್ದಾರ್ ಗೋವಿಂದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಎಂ. ಗಣೇಶ್ ಇದ್ದರು.