ಕೂಡಿಗೆ, ಅ. 12: ಇಲ್ಲಿಗೆ ಸಮೀಪದ ಯಡವನಾಡು ಮೀಸಲು ಅರಣ್ಯಕ್ಕೆ ಕಳೆದೆರಡು ದಿನಗಳಿಂದ ಗಿರಿಜನ ಕುಟುಂಬದವರು ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಕ್ರಮ ಪ್ರವೇಶ ಮಾಡಿದವರನ್ನು ತೆರವುಗೊಳಿಸಿದರು. ಆದರೆ ಗುರುವಾರ ಯಡವನಾಡು ಜೇನು ಕುರುಬರ 24 ಕುಟುಂಬಗಳು ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ವಿಭಾಗಗಳ ನೂರಕ್ಕೂ ಹೆಚ್ಚು ಅರಣ್ಯ ರಕ್ಷಕರನ್ನು ನಿಯೋಜಿಸಿ ಯಾರು ಪ್ರವೇಶಿಸದಂತೆ ನಿರ್ಬಂಧಿಸಲು ಭಾರಿ ಬಂದೋಬಸ್ತ್ ಅನ್ನು ಹಾಕಲಾಯಿತು.
ಅತಿಕ್ರಮಣ ಪ್ರವೇಶ ಮಾಡಿದಲ್ಲಿ ಜೇನುಕುರುಬರ ಕುಟುಂಬದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವದೆಂದು ಸೋಮವಾರಪೇಟೆ ಎ.ಸಿ.ಎಫ್ ಚಿಣ್ಣಪ್ಪ ತಿಳಿಸಿದರು.
ಇಂದು ಸೋಮವಾರಪೇಟೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಅರಣ್ಯ ರಕ್ಷಕರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯ ಮೇಲಧಿಕಾರಿಯ ಆದೇಶದನ್ವಯ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಚಿಣ್ಣಪ್ಪ ಹೇಳಿದರು. ಈ ಬಂದೋಬಸ್ತ್ನಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅರುಣ್ ಕುಮಾರ್ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೂಸಪ್ಪ ಸೇರಿದಂತೆ 60ಕ್ಕೂ ಹೆಚ್ಚು ಅರಣ್ಯ ರಕ್ಷಕರನ್ನು ನಿಯೋಜಿಸಲಾಗಿದೆ.
ಕಾನೂನಾತ್ಮಕವಾಗಿ ಹೋರಾಟ
ಯಡವನಾಡಿನಲ್ಲಿರುವ ಹಾಡಿಯ 24 ಬುಡಕಟ್ಟು ಜೇನುಕುರುಬ ಕುಟುಂಬದವರಿಗೆ ಈಗಾಗಲೇ 2 ಬಾರಿ ಸರ್ವೆ ನಡೆಸಿ ಮೀಸಲು ಅರಣ್ಯದಿಂದ ಹೊರತಾಗಿ 87.5 ಏಕರೆ ಪ್ರದೇಶವನ್ನು ಗುರುತಿಸಲಾಗಿದೆ. ಈ ಜಾಗವನ್ನು ಸರ್ವೆ ನಡೆಸಿದ ಸಂದರ್ಭ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಲಾಗಿತ್ತು. ಇದರಲ್ಲಿ ಅರಣ್ಯ ಇಲಾಖೆಯವರು ಸರ್ವೆಗೆ ಒಪ್ಪಿ ಸಹಿ ಮಾಡದ ಹಿನ್ನೆಲೆಯಲ್ಲಿ ಈ ಜಾಗದ ಪ್ರವೇಶಕ್ಕೆ ಅನುಮತಿ ಇಲ್ಲದಂತಾಗಿದೆ. ಈ ಜಾಗಕ್ಕೆ ಇದುವರೆಗೂ ಹಕ್ಕುಪತ್ರ ನೀಡಿರುವದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಹೋರಾಟ ಮಾಡಿ ಭೂಮಿಯನ್ನು ಪಡೆಯಲಾಗುವದೆಂದು ಬುಡಕಟ್ಟು ಜನಾಂಗದ ರಾಜ್ಯ ಸಂಚಾಲಕ, ಎಸ್.ಎನ್. ರಾಜಾರಾವ್, ತಾಲೂಕು ಬುಡಕಟ್ಟು ಜನಾಂಗದ ಅಧ್ಯಕ್ಷ ಆರ್.ಕೆ. ಚಂದ್ರು ಸುದ್ದಿಗಾರರಿಗೆ ತಿಳಿಸಿದರು.