ಸುಂಟಿಕೊಪ್ಪ, ಅ.12 : ಪುಟ್ಟ ಜಿಲ್ಲೆ ಕೊಡಗು ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ಅಧಿಕ ಸಂಖ್ಯೆಯಲ್ಲಿ ಕೊಡುಗೆಯಾಗಿ ನೀಡಿದೆ. ಇನ್ನಷ್ಟು ಕ್ರೀಡಾ ಪ್ರತಿಭೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮುವಂತಾಗಲಿ ಎಂದು ಸಂಸದ ಪ್ರತಾಪ್‍ಸಿಂಹ ಆಶಿಸಿದರು.
ಮಾದಾಪುರ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾದಾಪುರ ಚೆನ್ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣ ಮಾಡಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಸಾವಿರಾರು ಸೈನಿಕರನ್ನು ನೀಡಿದ ಕೊಡಗು ಜಿಲ್ಲೆಯಿಂದ ಈಗ ರಾಷ್ಟ್ರೀಯ ಹಾಕಿ ಕ್ರೀಡೆಯಲ್ಲಿ 5 ಮಂದಿ ಪ್ರತಿನಿಧಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ. ದೆಹಲಿಯಲ್ಲಿ ಅನೇಕ ಮಂದಿ ತಾನು ಪರಿಚಯ ಮಾಡಿಕೊಡುವಾಗ ಮೈಸೂರು ಕೊಡಗು ಸಂಸದ ಎಂದಾಗ ಕೊಡಗಿನ ಬಗ್ಗೆ ಅತ್ಯಂತ ಗೌರವ ವ್ಯಕ್ತಪಡಿಸುತ್ತಿರುವದು ಪುಟ್ಟ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಇರುವ ಮನ್ನಣೆಯಾಗಿದೆ ಎಂದು ನೆನಪಿಸಿದರು.
ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಾನೋಜಿ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಭಾರತ ದೇಶ ಇನ್ನಷ್ಟು ಸಾಧನೆ ಮಾಡುವಲ್ಲಿ ಪ್ರಾಥಮಿಕ ಶಾಲಾ ಮಟ್ಟದಿಂದಲೇ ದೈಹಿಕ ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಿ ತರಬೇತಿ ನೀಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಕೊಡಗು ಹುಟ್ಟು ಯೋಧರು ಕ್ರೀಡಾಪಟುಗಳ ತವರೂರಾಗಿದೆ. ಕ್ರೀಡೆ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾದಾಪುರ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿ ಅಧ್ಯಕ್ಷ ಕರ್ನಲ್ ಬಿಜಿವಿ ಕುಮಾರ್ ಮಾತನಾಡಿ ಜಿಲ್ಲಾಮಟ್ಟದ ಕ್ರೀಡಾಕೂಟ ನಮ್ಮ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ.
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಶೈಲಜಾ, ಚೆನ್ನಮ್ಮ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಎಂ.ಜಿ. ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ನಿರ್ದೇಶಕರುಗಳಾದ ಅನಿಲ್ ಪೊನ್ನಪ್ಪ, ಕೋದಂಡ ಮುದ್ದಪ್ಪ, ಎಂ.ಸಿ. ಬೋಜಮ್ಮ, ಸೀತಾ ಚೆಟ್ಟಿಯಪ್ಪ, ಜಾನಕಿ, ಕೆ.ಎಸ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಚೇತನ, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಮಾದಾಪುರ ಚೆನ್ನಮ್ಮ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಾಂಶುಪಾಲ ಮಂದಣ್ಣ ಸ್ವಾಗತಿಸಿ, ಉಪನ್ಯಾಸಕ ರಾಜಸುಂದರ ನಿರ್ವಹಿಸಿ, ಎನ್.ಎ. ರೇವತಿ ವಂದಿಸಿದರು.