ಕುಶಾಲನಗರ, ಅ. 12: ಸಂತ ಪರಂಪರೆ ಮುಂದುವರೆಸುವ ಮೂಲಕ ದೇಶವನ್ನು ಶ್ರೀಮಂತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಶ್ರೀ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 150ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂತರು ಅಳವಡಿಸಿಕೊಂಡ ಧಾರ್ಮಿಕತೆ ಮೂಲಕ ದೇಶದಲ್ಲಿ ಒಗ್ಗಟ್ಟು ಬೆಳೆಸಲು ಸಾಧ್ಯ. ಅಂದಿನ ಸಾಮಾಜಿಕ ಕಲ್ಪನೆ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಆದರ್ಶ ವ್ಯಕ್ತಿತ್ವದ ಮೂಲಕ ಬದುಕಿಗೆ ದಿಕ್ಸೂಚಿ ಕಂಡು ಕೊಳ್ಳಬಹುದು ಎಂದರು. ವಿದ್ಯೆಗಿಂತ ನಡತೆ ಮುಖ್ಯ ಎಂದ ಸ್ವಾಮೀಜಿಗಳು ಯುವಪೀಳಿಗೆ ಸಂತ ಶ್ರೇಷ್ಠರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.
ಈ ಸಂದರ್ಭ ಪ್ರಾಸ್ತಾವಿಕ ನುಡಿಗಳನ್ನಾಡಿ ಉಪನ್ಯಾಸ ನೀಡಿದ ಮುತ್ತಿನಕಟ್ಟೆ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಯಾವದೇ ಸಂದರ್ಭ ವ್ಯಾಮೋಹದಲ್ಲಿ ಸಿಲುಕದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬದುಕಿನಲ್ಲಿ ಹತಾಶರಾಗದೆ ಸಮಾಜಮುಖಿಯಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭ ವಿವೇಕಾನಂದ ವಿದ್ಯಾಸಂಸ್ತೆಯ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ, ಪರಿಷತ್ನ ತಾಲೂಕು ಘಟಕದ ಅಧ್ಯಕ್ಷರುಗಳಾದ ಮಹದೇವಪ್ಪ, ಮಾಯಾಮುಡಿ ಸುರೇಶ್, ಪ್ರಮುಖರಾದ ಸಂದೀಪ್, ಸೋಮಪ್ಪ, ನಿರ್ವಾಣಶೆಟ್ಟಿ, ಪದಾಧಿಕಾರಿಗಳು ಇದ್ದರು.
ಪ್ರೇಮನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.