ಮಡಿಕೇರಿ, ಅ. 12: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಯ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿ ಬರುವ ಮದ್ಯದಂಗಡಿ - ಬಾರ್‍ಗಳನ್ನು ಸ್ಥಳಾಂತರ ಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜುಲೈ 1 ರಿಂದ ಕಟ್ಟುನಿಟ್ಟಾಗಿ ಜಾರಿಯಾಗಿದೆ. ನಿರ್ದಿಷ್ಟ ಅಂತರದಲ್ಲಿ ಬಾರದ ಪರವಾನಗಿಗಳನ್ನು ಮಾತ್ರ ಅಬಕಾರಿ ವರ್ಷಾಂತ್ಯವಾದ ಜೂನ್ 30 ರೊಳಗೆ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಭಾದಿತ ಸನ್ನದುಗಳನ್ನು ಸ್ಥಳಾಂತರ ಮಾಡಲೇಬೇಕಾದ ನಿಖರ ಆದೇಶದೊಂದಿಗೆ ಇದಕ್ಕಾಗಿ ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿತ್ತು.

ಈ ನಡುವೆ ರಾಜ್ಯ ಸರಕಾರ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಡಿನೋಟಿಫಿಕೇಷನ್ ಮಾಡಿದ್ದರಿಂದಾಗಿ ಆರಂಭದಲ್ಲಿ ಭಾದೆಗೊಳಪಡದ ಸನ್ನದುಗಳೊಂದಿಗೆ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳು ಹೆದ್ದಾರಿ ಬಿಸಿಯಿಂದ ವಿನಾಯಿತಿ ಪಡೆದುಕೊಂಡಿದ್ದವು. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಮಡಿಕೇರಿ ನಗರಸಭೆ ವ್ಯಾಪ್ತಿಯ ಫೀ.ಮಾ. ಕಾರ್ಯಪ್ಪ ವೃತ್ತದಿಂದ (ಸುದರ್ಶನ) ಜನರಲ್ ತಿಮ್ಮಯ್ಯ ವೃತ್ತದವರೆಗಿನ ಮದ್ಯದಂಗಡಿ - ಬಾರ್‍ಗಳು ಮುಚ್ಚಲ್ಪಡಬೇಕಾಯಿತು. ಬಳಿಕ ನಗರಸಭೆ ಹಾಗೂ ಪ.ಪಂ. ವ್ಯಾಪ್ತಿಗೆ ವಿನಾಯಿತಿ ನೀಡಿ ನ್ಯಾಯಾಲಯದಿಂದ ಮರು ಆದೇಶ ಹೊರಬಿದ್ದ ಪರಿಣಾಮ ಅಲ್ಪ ಸಮಯದ ಬಳಿಕ ಈ ಮುಚ್ಚಲ್ಪಟ್ಟ ಮಳಿಗೆಗಳು ತೆರೆಯಲ್ಪಟ್ಟಿದ್ದವು.

218 ರಲ್ಲಿ 37 ಬಾಕಿ

ಕೊಡಗು ಜಿಲ್ಲೆಯಲ್ಲಿ ವಿವಿಧ ರೀತಿಯ ಪರವಾನಗಿಯೊಂದಿಗೆ ವಹಿವಾಟು ನಡೆಸುತ್ತಿದ್ದ ಒಟ್ಟು 218 ಸನ್ನದುಗಳ ಪೈಕಿ ಇದೀಗ 181 ಪರವಾನಗಿಗಳು ನವೀಕರಣವಾಗಿವೆ. 37 ಸನ್ನದುಗಳು ಇನ್ನೂ ನವೀಕರಣಗೊಂಡಿಲ್ಲ. ಈ ಪೈಕಿ 14 ಅರ್ಜಿಗಳು ಸ್ಥಳಾಂತರ ದೊಂದಿಗೆ ನವೀಕರಣಕ್ಕೆ ಬಂದಿದ್ದು ನವೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಭಾದಿತ ಸನ್ನದುಗಳ ಪೈಕಿ 22 ಪರವಾನಗಿದಾರರು ಇನ್ನೂ ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ. ಜಿಲ್ಲೆಯಲ್ಲಿ ಭೌಗೋಳಿಕ ಪರಿಸ್ಥಿತಿ, ಇನ್ನಿತರ ನಿಯಮಗಳ ಹಿನ್ನೆಲೆ ಸ್ಥಳಾಂತರಕ್ಕೆ ಸೂಕ್ತ ಜಾಗ ಸಿಗದೆ ಪರವಾನಗಿದಾರರು ಪಡಿಪಾಟಲು ಅನುಭವಿಸಿದ್ದಾರೆ. ಇದರೊಂದಿಗೆ ಅಲ್ಲಲ್ಲಿ ಸಾರ್ವಜನಿಕರಿಂದ ಹೊಸ ಜಾಗದಲ್ಲಿ ಮದ್ಯದಂಗಡಿ ತೆರೆಯಲು ವಿರೋಧವೂ ವ್ಯಕ್ತಗೊಳ್ಳುತ್ತಿದೆ.

ಸನ್ನದುಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯೊಳಗೆ ಯಾವದೇ ಸ್ಥಳಕ್ಕೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಇದರಂತೆ ವೀರಾಜಪೇಟೆ ತಾಲೂಕಿನಿಂದ ತಲಾ ಒಂದೊಂದು ಸಿಎಲ್ 9 ಹಾಗೂ ಸಿಎಲ್ 2 ಪರವಾನಗಿ ಮಡಿಕೇರಿ ತಾಲೂಕು ಹಾಗೂ ಸೋಮವಾರಪೇಟೆ ತಾಲೂಕಿಗೆ ಸ್ಥಳಾಂತರಗೊಂಡಿದೆ. ಮಡಿಕೇರಿಯಿಂದ ವೀರಾಜಪೇಟೆ ಹಾಗೂ ಸೋಮವಾರಪೇಟೆಗೆ ತಲಾ ಒಂದೊಂದು ಸಿಎಲ್ 9 ಹಾಗೂ ಸೋಮವಾರಪೇಟೆಯಿಂದ ವೀರಾಜಪೇಟೆಗೆ ಒಂದು ಸಿಎಲ್ 9 ಪರವಾನಗಿ ಸ್ಥಳಾಂತರಗೊಂಡಿದೆ.

ಬಾರದ ಮುಂದಿನ ಆದೇಶ

ಸೂಕ್ತ ಜಾಗ ಲಭ್ಯವಾಗದ ಹಿನ್ನೆಲೆಯಲ್ಲಿ ಹಲವು ಸನ್ನದುದಾರರಿಗೆ ಸೆಪ್ಟೆಂಬರ್ 30 ರೊಳಗೆ ಸ್ಥಳಾಂತರ ಮಾಡಿಕೊಳ್ಳಲು ಅವಕಾಶ ದೊರೆಯದಂತಾಗಿದೆ. ಕೊಡಗನ್ನು ಸಿಕ್ಕಿಂ, ಮಿಜೋರಾಂನಂತೆ ಗುಡ್ಡಗಾಡು ಪ್ರದೇಶ ಎಂದು ಪರಿಗಣಿಸಿ ವಿಶೇಷ ಪರಿಗಣನೆ ಮಾಡುವಂತೆ ಮಾಡಿದ ಮನವಿಗೂ ಸ್ಪಂದನ ದೊರೆತಿಲ್ಲ. ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಲೂ ಸಾಧ್ಯವಾಗದೆ ಬಾಕಿ ಇರುವ ಪರವಾನಗಿಗೆ ಸಂಬಂಧಿಸಿದಂತೆ ಇಲಾಖೆ ಅಥವಾ ಸರಕಾರದಿಂದ ಮುಂದಿನ ಆದೇಶ ಅಥವಾ ನಿರ್ಧಾರ ಇನ್ನೂ ಹೊರಬಿದ್ದಿಲ್ಲ. ಈ ನಡುವೆ ಸಿಎಲ್ 7 (ವಸತಿಗೃಹ ಸಹಿತದ ಪರವಾನಗಿ) ಸನ್ನದುದಾರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇದರ ವಿಚಾರಣೆ ಮುಂದುವರಿಯುತ್ತಿದೆ.