ಗೋಣಿಕೊಪ್ಪಲು, ಅ. 12: ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ 2ನೇ ವರ್ಷದ ಅಂತರ್ಶಾಲಾ ಮಾಸ್ಟರ್ಸ್ ಹಾಕಿ ಕಪ್ ತಾ. 27 ರಿಂದ 2 ದಿನಗಳ ಕಾಲ ನಡೆಯಲಿದೆ ಎಂದು ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ ತಿಳಿಸಿದ್ದಾರೆ.
ಕಿರಿಯರನ್ನು ಹಾಕಿಯಲ್ಲಿ ಪ್ರೋತ್ಸಾಹಿಸಲು 2 ನೇ ವರ್ಷದ ಹಾಕಿ ಕಪ್ನ್ನು ಹಾಕಿ ಕರ್ನಾಟಕ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಆಯೋಜಿಸುತ್ತಿದ್ದೇವೆ. ಇದರಂತೆ 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಬಾರಿ ನಡೆದ ಹಾಕಿಕೂರ್ಗ್ ಬಾಲಕರ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ 8 ತಂಡಗಳಿಗೆ ಆಹ್ವಾನಿತ ಕಪ್ ಮೂಲಕ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಚಾಂಪಿಯನ್ ತಂಡಕ್ಕೆ 30 ಸಾವಿರ ನಗದು, ರನ್ನರ್ ಅಪ್ ತಂಡಕ್ಕೆ 15 ಸಾವಿರ ನಗದು, ಉತ್ತಮ ಗೋಲ್ ಕೀಪರ್, ಉತ್ತಮ ಮುನ್ನಡೆ ಆಟಗಾರ ಹಾಗೂ ರಕ್ಷಣಾತ್ಮಕ ಆಟಗಾರನಿಗೆ ತಲಾ 5 ಸಾವಿರ ರೂಗಳ ವಿಶೇಷ ಪ್ರಶಸ್ತಿ ನೀಡಲಾಗುವದು ಎಂದರು.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಫೌಂಡೇಷನ್ ವತಿಯಿಂದ ಉತ್ತೇಜನ ನೀಡಲು ಅವರಿಗೆ ವಿಶೇಷ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಅಂತರ್ರಾಷ್ಟ್ರೀಯ ಮಾಜಿ ಹಾಕಿ ಆಟಗಾರ ಬಿ. ಪಿ. ಗೋವಿಂದ ಅವರು ಆಗಮಿಸಲಿದ್ದು, ಇವರಿಂದ ಕಿರಿಯ ಆಟಗಾರರಿಗೆ ಒಂದಷ್ಟು ಸಲಹೆಗಳು ದೊರೆಯಲಿದೆ ಎಂದರು.
ಗೋಷ್ಠಿಯಲ್ಲಿ ಎಎಸ್ಎಫ್ ನಿರ್ದೇಶಕ ದತ್ತಾ ಕರುಂಬಯ್ಯ, ಹಾಕಿ ತರಬೇತುದಾರ ಚೇತನ್ ಉಪಸ್ಥಿತರಿದ್ದರು.