ಮಡಿಕೇರಿ, ಅ.12 : ಕಾವೇರಿ ತುಲಾಸಂಕ್ರಮಣದ ಹಿನ್ನೆಲೆಯಲ್ಲಿ ತಲಕಾವೇರಿಯಿಂದ ಭಾಗಮಂಡಲದ ವರೆಗೆ ಸ್ವಚ್ಛತಾ ಶ್ರಮದಾನ ಹಾಗೂ ಜನಜಾಗೃತಿಯನ್ನು ಮೂಡಿಸಲು ಗ್ರೀನ್ ಸಿಟಿ ಫೋರಂ ಸಂಘಟನೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಸಂಚಾಲಕರಾದ ಚೈಯ್ಯಂಡ ಸತ್ಯ ಕಳೆದ ಕೆಲವು ವರ್ಷಗಳಿಂದ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯ ಮತ್ತು ಅಭಿಯಾನ ನಡೆಸಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗ್ರೀನ್ ಸಿಟಿ ಫೋರಂ ಯಶಸ್ವಿಯಾಗಿದೆ. ಸಂಘಟನೆಯ ಈ ಸಮಾಜಮುಖಿ ಕಾರ್ಯವನ್ನು ಗುರುತಿಸಿರುವ ಕೊಡಗು ಜಿಲ್ಲಾಡಳಿತ ಕಾವೇರಿ ತುಲಾಸಂಕ್ರಮಣದ ಪ್ರಯುಕ್ತ ತಲಕಾವೇರಿಯಿಂದ ಭಾಗಮಂಡಲ ದವರೆಗೆ ಸ್ವಚ್ಛತಾ ಅಭಿಯಾನ ನಡೆಸಲು ಸಹಕಾರವನ್ನು ಕೋರಿದೆ ಎಂದರು.

ತಾ.14 ರಂದು ತಲಕಾವೇರಿ ಯಿಂದ ಭಾಗಮಂಡಲದವರೆಗೆ ಸ್ವಚ್ಛತಾ ಕಾರ್ಯ ಮಾಡುವದಲ್ಲದೆ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುವದು. ಸ್ವಚ್ಛತೆ ಕಾಪಾಡುವ ಮೂಲಕ ಪವಿತ್ರ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಉಳಿಸುವಂತೆ ಭಕ್ತರಿಗೆ ಮನವಿ ಮಾಡುವ ಜಾಗೃತಿ ಫಲಕಗಳನ್ನು ಕನ್ನಡ, ಇಂಗ್ಲೀಷ್, ಮಲಯಾಳ ಹಾಗೂ ತಮಿಳು ಭಾಷೆಗಳಲ್ಲಿ ಅಳವಡಿಸಲಾಗುವದು ಎಂದು ತಿಳಿಸಿದರು.

ಈ ಶ್ರಮದಾನದಲ್ಲಿ ಕೊಡಗು ಜಿಲ್ಲಾ ಪೊಲೀಸ್‍ನ ಸುಮಾರು ನೂರಕ್ಕೂ ಅಧಿಕ ಸಿಬ್ಬಂದಿಗಳು ಪಾಲ್ಗೊಳ್ಳುತ್ತಿರುವದು ದಾಖಲೆಯಾಗÀ ಲಿದೆ. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ. ರಾಜೇಂದ್ರ ಪ್ರಸಾದ್ ಅವರೇ ಸ್ವಚ್ಛತಾ ಶ್ರಮದಾನ ದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಿರುವದು ಮತ್ತೊಂದು ವಿಶೇಷವಾಗಿದೆ ಎಂದು ಚೈಯ್ಯಂಡ ಸತ್ಯ ಹೇಳಿದರು.

ತಾ.14 ರಂದು ಬೆಳಗ್ಗೆ 10 ಗಂಟೆಗೆ ತಲಕಾವೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನಕ್ಕೆ ಭಾರತೀಯ ವಿದ್ಯಾಭವನ ಕೊಡಗು ಜಿಲ್ಲೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು.

ಫೋರಂನ ಸದಸ್ಯರು ಹಾಗೂ ವಕೀಲರಾದ ರತನ್ ತಮ್ಮಯ್ಯ ಮಾತನಾಡಿ, ಸ್ವಚ್ಛತೆಯ ಮೂಲಕ ನದಿಗಳ ಸಂರಕ್ಷಣೆಯಾಗಬೇಕಾಗಿದ್ದು, ಕಾವೇರಿ ನದಿ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಂದ ಕಲುಷಿತವಾಗುವ ದನ್ನು ತಡೆಯಬೇಕಾಗಿದೆ ಎಂದರು.

ಸದಸ್ಯರಾದ ಮೋಂತಿ ಗಣೇಶ್ ಮಾತನಾಡಿ, ಮಡಿಕೇರಿ ನಗರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಹಿರಿಯರಲ್ಲಿ ಜಾಗೃತಿ ಮೂಡದೆ ಇರುವದರಿಂದ ಮಕ್ಕಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರುಗಳಾದ ಕೃಷ್ಣಮೂರ್ತಿ, ಅಂಬೆಕಲ್ಲು ನವೀನ್ ಕುಶಾಲಪ್ಪ ಹಾಗೂ ಜಯಾಚಿಣ್ಣಪ್ಪ ಉಪಸ್ಥಿತರಿದ್ದರು.