ಸೋಮವಾರಪೇಟೆ, ಅ.12: ಕೊರೆಯದ ಕೊಳವೆ ಬಾವಿಗೆ 99,600 ರೂಪಾಯಿ ಬಿಲ್ ಮಾಡಿ ಹಣವನ್ನು ಗುಳುಂ ಮಾಡಿದ್ದ ಪ್ರಕರಣ ಮೊನ್ನೆ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿಸಿದ ಘಟನೆಗೆ ಸಂಬಂಧಿಸಿದಂತೆ; ನಿನ್ನೆ ರಾತೋರಾತ್ರಿ ಬೋರ್‍ವೆಲ್ ಕೊರೆಯಲಾಗಿದೆ.ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಕುಡಿಯುವ ನೀರಿನ ಉದ್ದೇಶದಿಂದ ಕೊಳವೆಬಾವಿ ಕೊರೆ ಯಲಾಗಿದ್ದು, ಇದಕ್ಕೆ ಕುಶಾಲನಗರದ ಮಿಥುನ್ ಬೋರ್‍ವೆಲ್ಸ್ ಕಂಪೆನಿಗೆ 99,600 ರೂಪಾಯಿ ಹಣ ನೀಡ ಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಗುಳುಂ ಮಾಡಿದ್ದ ಪ್ರಕರಣವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಬನ್ನಳ್ಳಿ ಪೂರ್ಣಿಮಾ ಗೋಪಾಲ್ ಬಹಿರಂಗಗೊಳಿಸಿದ್ದರು.

ಈ ವಿಷಯವಾಗಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸಂಬಂಧಿಸಿದ ಇಲಾಖೆಯ ಅಭಿಯಂತರರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಹಾನಗಲ್ಲು ಗ್ರಾಮದ ಕೆರೆಯ ಸಮೀಪ ಕೊರೆಯಲಾಗಿರುವ ಬೋರ್‍ವೆಲ್‍ನ ಚಿತ್ರವನ್ನು ಲಗತ್ತಿಸಿ, ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬೋರ್‍ವೆಲ್ ಕೊರೆಸಲಾಗಿದೆ ಎಂದು ದಾಖಲೆಗಳನ್ನು ನಿರ್ಮಿಸಿ 99,600 ಹಣವನ್ನು

(ಮೊದಲ ಪುಟದಿಂದ) ತಾ. 22.07.2017ರಂದು ಡ್ರಾ ಮಾಡಲಾಗಿತ್ತು. ಬರ ನಿರ್ವಹಣೆ ಅನುದಾನ ವನ್ನು ಈ ರೀತಿ ಗುಳುಂ ಮಾಡಿದ್ದ ಅಭಿಯಂತರರು ಕೊನೆಗೂ ಸಿಕ್ಕಿಬಿದ್ದಿದ್ದರು. ಇದರಿಂದ ಪಾರಾಗಲು ನಿನ್ನೆ ರಾತ್ರಿ ಬೋರ್‍ವೆಲ್ ವಾಹನವನ್ನು ಕರೆಸಿ ಇಲ್ಲಿನ ಆಂಜನೇಯ ದೇವಾಲಯದ ಬಳಿ ರಾತ್ರಿ ವೇಳೆ ಹೊಸ ಕೊಳವೆಬಾವಿ ಕೊರೆಸಿದರು. ಸುಮಾರು 400 ಅಡಿ ಆಳದವರೆಗೆ ಕೊರೆದರೂ ನೀರು ಮಾತ್ರ ಲಭ್ಯವಾಗದ ಹಿನ್ನೆಲೆ ವಾಪಸ್ ತೆರಳಿದರು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಪೂರ್ಣಿಮಾ ಗೋಪಾಲ್, ಈಗಾಗಲೇ ಡ್ರಾ ಮಾಡಲಾಗಿರುವ ಹಣದಲ್ಲೇ ಬೋರ್‍ವೆಲ್ ಕೊರೆಸ ಬೇಕು ಎಂದು ಇಂಜಿನಿಯರ್‍ಗೆ ಸೂಚನೆ ನೀಡಿದ್ದೇವೆ. ನಿನ್ನೆ ಕೊರೆದಿರುವ ಬೋರ್‍ವೆಲ್‍ನಲ್ಲಿ ನೀರು ಸಿಕ್ಕಿಲ್ಲ. ಇದಕ್ಕೆ ಜಿ.ಪಂ. ಜವಾಬ್ದಾರಿಯಲ್ಲ; ಅಭಿಯಂತರರೇ ಸಂಪೂರ್ಣ ಜವಾಬ್ದಾರಿ ಹೊತ್ತು ಬೇರೆಡೆ ಬೋರ್‍ವೆಲ್ ಕೊರೆದು ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಬೇಕು. ತಪ್ಪಿದಲ್ಲಿ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವದು ಎಂದು ತಿಳಿಸಿದ್ದಾರೆ.

ಅಂತರ್ಜಲ ಕುಸಿಯುತ್ತಿರುವ ದರಿಂದ ಸರಕಾರದ ಆದೇಶದಂತೆ ಬೋರ್‍ವೆಲ್ ಕೊರೆಯಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಿದೆ. ಆದರೆ ಇಲ್ಲಿ ರಾತೋರಾತ್ರಿ ಬೋರ್‍ವೆಲ್ ಕೊರೆಯಲಾಗಿದೆ. ಇದೊಂದು ರೀತಿಯ ಅಧಿಕಾರಿಗಳ ಹಗಲು ದರೋಡೆಯಾಗಿದ್ದು, ಎಸಿಬಿ ಅಥವಾ ಲೋಕಾಯುಕ್ತ ತನಿಖೆಗೆ ಅರ್ಹವಾದ ಪ್ರಕರಣವಾಗಿದೆ. ಕೇಳುವವರೇ ಇಲ್ಲವಾದರೆ ಇದೇ ರೀತಿ ಮುಂದುವರಿಯುತ್ತದೆ. ಇನ್ನೂ ಕೆರೆ, ಬಾವಿ, ಹೊಸ ಗ್ರಾಮವನ್ನೇ ಸೃಷ್ಟಿಸಿ ದಾಖಲೆಯಲ್ಲಿ ತೋರಿಸಿ ‘ಗುಳುಂ’ ಮಾಡಿದರೂ ಅತಿಶಯೋಕ್ತಿ ಯೆನಿಸದು...!

-ವಿಜಯ್