ಗೋಣಿಕೊಪ್ಪಲು, ಅ. 12: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪೊನ್ನಂಪೇಟೆಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 6 ಸಾವಿರ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಲಿರುವ ದರಿಂದ ಸಮ್ಮೇಳನ ಸುಸೂತ್ರವಾಗಿ ನಡೆಯಲು ಉಪ ಸಮಿತಿಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಹೇಳಿದರು.
ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ವೆಚ್ಚ 30 ಲಕ್ಷ ರೂ. ಅಂದಾಜಿಸಲಾಗಿದೆ. 6 ಸಾವಿರ ಕನ್ನಡಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಒಂದು ವಾರದೊಳಗಾಗಿ ಎಲ್ಲಾ ಉಪಸಮಿತಿಗಳೊಂದಿಗೆ ಚರ್ಚಿಸಿ ಸಮ್ಮೇಳನವನ್ನು ಸುಸೂತ್ರವಾಗಿ ನಡೆಸಲು ಯೋಜನೆ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದರು.
ಸಮ್ಮೇಳನಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆ, ಪೊನ್ನಂಪೇಟೆ ನಗರದ ಪ್ರವೇಶ ದ್ವಾರಗಳ ಸಿಂಗಾರ, ಮೆರವಣಿಗೆ ಪೂರ್ವ ತಯಾರಿ, ಸಾಂಸ್ಕøತಿಕ ಕಾರ್ಯಕ್ರಮ, ಆಹ್ವಾನ ಪತ್ರಿಕೆ ಮುದ್ರಣ ಹಾಗೂ ಹಂಚುವಿಕೆ, ಸ್ಮರಣ ಸಂಚಿಕೆ, ವೇದಿಕೆ ನಿರ್ಮಾಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಈ ಸಂದರ್ಭ ಚರ್ಚೆ ನಡೆಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಪೊನ್ನಂಪೇಟೆಯಲ್ಲಿ ಉತ್ತಮ ನಿರೀಕ್ಷೆಯೊಂದಿಗೆ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಪೋಷಕರು ಮಕ್ಕಳನ್ನು ಸಮ್ಮೇಳನಕ್ಕೆ ಕರೆತರುವಲ್ಲಿ ಮುಖ್ಯ ಪಾತ್ರ ವಹಿಸುವಂತೆ ಯೋಜನೆ ರೂಪಿಸಬೇಕಾಗಿದೆ ಎಂದರು.
ಈ ಸಂದರ್ಭ ತಾ.ಪಂ ಇಒ ಕಿರಣ್ ಪಡ್ನೇಕರ್, ತಾ.ಪಂ ಉಪಾಧ್ಯಕ್ಷ ನೆಲ್ಲೀರ ಚಲನ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ ಗಣೇಶ್, ಸದಸ್ಯ ಕುಟ್ಟಂಡ ಅಜಿತ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಡಾ. ಚಂದ್ರಶೇಖರ್, ಪ್ರಮುಖರುಗಳಾದ ಡಾ. ಶಿವಪ್ಪ ಹಾಗೂ ಕೇಶವ ಕಾಮತ್ ಉಪಸ್ಥಿತರಿದ್ದರು.