ಕೂಡಿಗೆ, ಅ. 12: ರಾಷ್ಟ್ರೀಯ ಸೇವಾ ಯೋಜನೆ ಗ್ರಾಮೀಣ ಅಭಿವೃದ್ಧಿಯನ್ನು ಉದ್ದೇಶ ವಿರಿಸಿಕೊಂಡ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯ ಧ್ಯೇಯೋದ್ದೇಶಗಳನ್ನು ಹೊಂದಿದೆ. ಈ ರಾಷ್ಟ್ರೀಯ ಸೇವಾ ಯೋಜನೆ ಗ್ರಾಮೀಣ ಪ್ರದೇಶದ ಪರಿಚಯವನ್ನು ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಪರಿಚಯಿಸುವ ಯೋಜನೆಯಾಗಿದೆ ಎಂದು ಶಿರಂಗಾಲ ಸರ್ಕಾರಿ ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ಸೋಮಯ್ಯ ಹೇಳಿದರು.

ಚಿಕ್ಕ ನಾಯಕನ ಹೊಸಳ್ಳಿ ಗ್ರಾಮದಲ್ಲಿ 7 ದಿನಗಳ ಕಾಲ ನಡೆದ ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿದ್ದು ಅಲ್ಲಿನ ಜನರ ಬದುಕಿನ ರೀತಿ ನೀತಿಗಳನ್ನು ಅರಿಯಲು ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯ ಎನ್.ಎಸ್. ಜಯಣ್ಣ ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ಶಿಬಿರದಲ್ಲಿ ಅತ್ಯುತ್ತಮ ಕೆಲಸ ಮಾಡಿರುವದು ಶ್ಲಾಘನೀಯ ಎಂದರು.

ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್ ಮಾತನಾಡಿ, ಶಿಬಿರದಲ್ಲಿ ಕಲಿತಿರುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾರಿಗೊಳಿಸ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎಸ್. ಮಹೇಶ್ ವಹಿಸಿದ್ದರು. ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್, ಶಿಬಿರಾಧಿಕಾರಿ ನಾಗರಾಜ್, ಸಹ ಶಿಬಿರಾಧಿಕಾರಿ ಸಿ.ಎಸ್. ಹೇಮಲತಾ, ಹೆಚ್.ಆರ್. ಶಿವಕುಮಾರ್, ಕೆ.ಎನ್. ಪಲ್ಲವಿ ಇದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್ ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ಯುವಕರ ಪಾತ್ರ ಪ್ರಸ್ತುತ ಎಷ್ಟು ಅವಶ್ಯಕವಾಗಿದೆ ಎಂಬದನ್ನು ತಿಳಿಸಿ ಕೊಟ್ಟರು.

ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ‘ಸ್ವಾಮಿ ವಿವೇಕಾ ನಂದರ ಚಿಂತನೆಯಲ್ಲಿ ಯುವಕರ ಸದ್ಬಳಕೆ’ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಶಿಬಿರಾಧಿಕಾರಿ ಗಳಾದ ಹಂಡ್ರಂಗಿ ನಾಗರಾಜ್ ‘ಗಾಂಧೀಜಿಯವರ ಕನಸಿನ ರಾಮ ರಾಜ್ಯ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಸ.ಪ.ಪೂ ಕಾಲೇಜು ಆಲೂರು-ಸಿದ್ದಾಪುರ ಪ್ರಾಂಶುಪಾಲ ಜಿ.ಟಿ. ಗಣಪತಿ ಭಟ್ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆಯ ಪಾತ್ರದ ಕುರಿತು ಮಾತನಾಡಿದರು. ಸಿ.ವಿ. ಕಾವ್ಯ, ಗಣೇಶ್, ಇ.ಆರ್. ವಿನುತಾ ಕಾರ್ಯಕ್ರಮ ನಿರ್ವಹಿಸಿದರು.