ಮಡಿಕೇರಿ, ಅ.14 : ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನ ಆರ್ಥಿಕತೆಯ ಬೆನ್ನೆಲುಬು ಕಾಫಿ. ಇದರೊಂದಿಗೆ ಮಿಶ್ರ ಬೆಳೆಯಾದ ಕರಿಮೆಣಸು ಸೇರುತ್ತದೆ. ಪ್ರಸ್ತುತ ಈ ಎರಡು ಫಸಲಿಗೂ ಬೆಲೆ ಕುಸಿತ- ಮದ್ಯದಲ್ಲಿ ಬರಗಾಲದ ಸ್ಥಿತಿಯಿಂದ ಜನತೆ ಪರಿತಪಿಸುತ್ತಿದ್ದು, ನಡುವೆ ಇದೀಗ ಸಮಯವಲ್ಲದ ಸಮಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತೆ ಮತ್ತಷ್ಟು ಆತಂಕ ಸೃಷ್ಟಿಸುತ್ತಿದೆ. ಕಾಫಿ ಫಸಲಿಗೆ ಈ ಬಾರಿ ತುಸು ಬೇಗ ಎನಿಸಿದರೂ ಜನತೆ ನಿರೀಕ್ಷಿಸಿರದ ರೀತಿಯಲ್ಲಿ ಇಡೀ ಜಿಲ್ಲೆಯಾದ್ಯಂತ ಸುರಿದ ಅಗತ್ಯ ಪ್ರಮಾಣದ ಮಳೆ (ಅದೂ ಏಕ ಕಾಲದಲ್ಲಿ) ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿತ್ತು. ಆದರೆ ಫಸಲು ಬರುವ ಸಮಯ ಬರುತ್ತಿರುವ ಸನ್ನಿವೇಶದಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ- ಸಂಕಟ ಇದೇ ಬೆಳೆಗಾರರದ್ದಾಗಿದೆ. ಜಿಲ್ಲೆ ಈ ಹಿಂದಿನ ವರ್ಷಗಳಲ್ಲಿ ವಾಡಿಕೆಯಂತೆ ಜೂನ್ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ ಮಳೆಗಾಲ ಎದುರಿಸುತ್ತಿತ್ತು. ಇದಾದ ಬಳಿಕ ಮಳೆ ಇಳಿಮುಖಗೊಂಡು ಜಿಲ್ಲೆಯಲ್ಲಿ ಬೆಳೆಯುವ ಕಾಫಿ, ಭತ್ತ, ಕರಿಮೆಣಸು ಇತ್ಯಾದಿ ಫಸಲುಗಳು ಕಳೆಗಟ್ಟುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಕಂಡು ಬರುತ್ತಿರುವ ಏರು- ಪೇರು ಎಲ್ಲವನ್ನೂ ಬುಡಮೇಲು ಮಾಡುತ್ತಿದೆ. ಒಂದಲ್ಲಾ ಒಂದು ಸಮಸ್ಯೆಯಿಂದಾಗಿ ಪ್ರತಿವರ್ಷ ರೈತಾಪಿ ವರ್ಗದವರು ಸಮಸ್ಯೆಗಳ ಸರಮಾಲೆ ಎದುರಿಸುವದೇ ಮುಂದುವರಿಯುತ್ತಿದೆ. ಪ್ರಸಕ್ತ ವರ್ಷವೂ ಇದೇ ಪರಿಸ್ಥಿತಿ ಮರುಕಳಿಸುತ್ತಿರುವದು ಬೆಳೆಗಾರರು ಆತಂಕಗೊಳ್ಳುವಂತಾಗಿದೆ. ಕಾವೇರಿ ಸಂಕ್ರಮಣದ ಸಮಯದಲ್ಲಿ ಅಲ್ಲಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಫಸಲು ಧರಾಶಾಹಿಯಾಗುವಂತಾಗಿದೆ.

ಕಾಫಿ ಹೂ ಮಳೆ ಬೇಗ ಸುರಿದ ಪರಿಣಾಮ ಬಹುತೇಕ ಕಡೆಗಳಲ್ಲಿ ಅರೆಬಿಕಾ ಕಾಫಿ ಹಣ್ಣಾಗುತ್ತಿದೆ. ಕಾಫಿ ತೋಟದಲ್ಲಿ ವಿವಿಧ ಕೆಲಸಗಳ ನಿರ್ವಹಣೆಯ ಸಮಯವೂ ಇದಾಗಿದೆ. ತೋಟ ಎರತೆ, ಕಚ್ಚಡ ಸ್ಪ್ರೇ- ಗೊಬ್ಬರ ಹಾಕುವ ಕೆಲಸದ ನಡುವೆ ಹಣ್ಣಾದ ಕಾಫಿಯನ್ನು ಕುಯ್ಯುವದು ಕಷ್ಟಸಾಧ್ಯವಾಗಿದೆ. ಇದರೊಂದಿಗೆ ಮೋಡ ಕವಿದ ವಾತಾವರಣದಿಂದಾಗಿ ಕಾಫಿ ಕುಯಿಲು ಮಾಡಿದರೂ ಒಣಗಿಸುವದು ಕಷ್ಟವಾಗುತ್ತಿದೆ. ಕಾಫಿ ಉದುರುವಿಕೆಯೂ ಹೆಚ್ಚಾಗುತ್ತಿದೆಯಲ್ಲದೆ ಈಗಿನ ಮಳೆಯಿಂದಾಗಿ ಅರೆಬಿಕಾ ಗಿಡಗಳಲ್ಲಿ ಎಲೆಕೊಳೆಯುವ ರೋಗ ಹೆಚ್ಚಾಗುತ್ತದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಹೆಚ್ಚು ತೇವಾಂಶವಿರುವದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದ ಅವರು ಭತ್ತದ ಫಸಲೂ ತೆನೆಕಟ್ಟು ಸಮಯ ಇದಾಗಿದ್ದು, ಸೂರ್ಯನ ಕಿರಣದ ಅಗತ್ಯತೆ

(ಮೊದಲ ಪುಟದಿಂದ) ಇದೆ. ಆದರೆ ಮೋಡ ಕವಿದ ವಾತಾವರಣ ಭತ್ತ ತೆನೆ ಕಟ್ಟುವದರ ಮೇಲೂ ದುಷ್ಪರಿಣಾಮ ಬೀರಲಿದೆ. ತೇವಾಂಶದಿಂದಾಗಿ ಕರಿಮೆಣಸು ತಿರುಳೂ ಉದುರುತ್ತಿರುವದು ಅಲ್ಲಲ್ಲಿ ಕಂಡುಬರುತ್ತಿದೆ.

ರೋಬಸ್ಟಾ ಕಾಫಿಯೂ ಹಣ್ಣಾಗುವ ಹಂತ ತಲಪುತ್ತಿದ್ದು, ಈಗಿನ ಮಳೆಯಿಂದ ಉದುರುವಿಕೆ ಹೆಚ್ಚಾಗುತ್ತಿದೆ ಎಂದು ಬೋಸ್ ಮಂದಣ್ಣ ಅನುಭವ ಹಂಚಿಕೊಂಡರು.

ಸರಾಸರಿ 18 ಇಂಚು ಹೆಚ್ಚು ಮಳೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಳೆ ಕಡಿಮೆ ಎನಿಸಿದರೂ ಸಮಯವಲ್ಲದ ಸಮಯದಲ್ಲಿ ಸುರಿಯುತ್ತಿರುವ ಮಳೆ ಕೃಷಿ ಪ್ರಧಾನ ಜಿಲ್ಲೆಯ ಬೆಳೆಗಳಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಈತನಕ ಸರಾಸರಿ 18 ಇಂಚು ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಈ ಅವಧಿಯವರೆಗೆ ಸರಾಸರಿ 68.13 ಇಂಚು ಮಳೆಯಾಗಿದ್ದರೆ ಈ ಬಾರಿ 86.23 ಇಂಚು ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈ ತನಕ 104.28 ಇಂಚು ಮಳೆಯಾಗಿದ್ದರೆ ಪ್ರಸಕ್ತ ವರ್ಷ 121.84 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿಗೆ ಕಳೆದ ವರ್ಷ ಈತನಕ 48.11 ಇಂಚು ಮಳೆಯಾಗಿತ್ತು. ಈ ಬಾರಿ 69.28 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿಗೆ ಕಳೆದ ಸಾಲಿನಲ್ಲಿ ಈ ತನಕ 51.99 ಇಂಚು ಮಳೆಯಾಗಿದ್ದರೆ 2017ರಲ್ಲಿ 67.56 ಇಂಚು ಮಳೆ ಸುರಿದಿದೆ.