ಮಡಿಕೇರಿ, ಅ. 14: ಇಂದು ಕಾಳು ಮೆಣಸು ದರ ರೂ. 650 ರಿಂದ ರೂ. 350 ಕ್ಕೆ ಕುಸಿದಿರುವಂತೆಯೇ ಜಿಲ್ಲೆಯಲ್ಲಿ ಕಾಳು ಮೆಣಸು ಆಮದಿನ ವಿರುದ್ಧದ ಹೋರಾಟ ಹೆಚ್ಚಾಗುತ್ತಿದೆ. ದೇಶದ ಕಾಳುಮೆಣಸು ವಹಿವಾಟಿನ ಪೂರ್ಣ ಚಿತ್ರಣ ನೀಡುವದೇ ಈ ಲೇಖನದ ಉದ್ದೇಶ. ವಿಶ್ವದ ಮೆಣಸು ಉತ್ಪಾದನೆವಿಶ್ವದಲ್ಲಿ ಅತ್ಯಧಿಕ ಕಾಳು ಮೆಣಸು ಉತ್ಪಾದಿಸುವ ದೇಶ ವಿಯಟ್ನಾಂ ಆಗಿದ್ದು ಇದರ ವಾರ್ಷಿಕ ಉತ್ಪಾದನೆ 1.68 ಲಕ್ಷ ಟನ್ ಇದ್ದುದು 2016-17 ನೇ ಸಾಲಿನಲ್ಲಿ ಎರಡು ಲಕ್ಷ ಟನ್ಗಳಿಗೆ ಏರಿಕೆ ಆಗಿದೆ. ಕಾಳು ಮೆಣಸಿನ ಉತ್ಪಾದನೆಯ ಎರಡನೇ ಅತೀ ದೊಡ್ಡ ದೇಶ ಇಂಡೋನೇಷ್ಯಾ ಆಗಿದ್ದು ಇದರ ವಾರ್ಷಿಕ ಉತ್ಪಾದನೆ 90 ಸಾವಿರ ಟನ್ಗಳಾಗಿವೆ. ಮೂರನೇ ಸ್ಥಾನ ಭಾರತದ್ದಾಗಿದ್ದು ಇಲ್ಲಿನ ಉತ್ಪಾದನೆ ವಾರ್ಷಿಕ 60 ಸಾವಿರ ಟನ್ಗಳಾಗಿವೆ. ನಾಲ್ಕನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು ಇದರ ಉತ್ಪಾದನೆ ವಾರ್ಷಿಕ 42 ಸಾವಿರ ಟನ್ ಹಾಗೂ ಚೀನಾದಲ್ಲಿ 32 ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ವಿಶ್ವದ ಒಟ್ಟು ವಾರ್ಷಿಕ ಉತ್ಪಾದನೆ 5 ಲಕ್ಷ ಟನ್ಗಳೆಂದು ಅಂದಾಜಿಸಲಾಗಿದೆ.
ವಿಯಟ್ನಾಂ ದರ
ವಿಯಟ್ನಾಂನಲ್ಲಿ ಕಳೆದ ವರ್ಷ ಕಾಳು ಮೆಣಸಿನ ದರ ಹೆಚ್ಚಿದ್ದು ಈ ವರ್ಷ ಬೆಳೆ ಹೆಚ್ಚಾದ ಕಾರಣ ಕುಸಿತ ಕಂಡಿದೆ. ಪ್ರಸ್ತುತ ಟನ್ ಒಂದಕ್ಕೆ 4000 ದಿಂದ 4250 ಅಮೇರಿಕನ್ ಡಾಲರ್ ದರ ಇದ್ದು ಕೆಜಿಯೊಂದಕ್ಕೆ ಸುಮಾರು 250 ರಿಂದ 300 ರೂಪಾಯಿಗಳಾಗುತ್ತದೆ. ಆದರೆ ಈ ಮೆಣಸಿನ ಗುಣಮಟ್ಟ ಭಾರತದಕ್ಕಿಂತ ಕಡಿಮೆ ಆಗಿದ್ದರೂ ಭಾರತದ ಕರಿಮೆಣಸು ರಫ್ತಿಗೆ ಭಾರೀ ಹೊಡೆತ ನೀಡಿರುವದಂತೂ ನಿಜ. ತಜ್ಞರ ಪ್ರಕಾರ ವಿಯಟ್ನಾಂ ಕಾಳು ಮೆಣಸಿನಲ್ಲಿ ಕ್ರಿಮಿನಾಶಕಗಳ ಅಂಶ ಜಾಸ್ತಿ ಇದೆ ಎನ್ನಲಾಗಿದೆ. ಭಾರತ ಅಲ್ಪ ಪ್ರಮಾಣದಲ್ಲಿ ಕಾಳು ಮೆಣಸನ್ನು ರಫ್ತು ಮಾಡುತ್ತದಾದರೂ ಇದು ಆಂತರಿಕ ಮಾರುಕಟ್ಟೆಯ ದರ ಕುಸಿತದ ಮೇಲೆ ಹೆಚ್ಚಿನ ಪರಿಣಾಮ ಬೀರುವದಿಲ್ಲ. ಏಕೆಂದರೆ ಭಾರತದಲ್ಲಿ ಉತ್ಪಾದನೆ ಆಗುವ ಮೆಣಸು ದೇಶದ ಆಂತರಿಕ ಬಳಕೆಗೇ ಸಾಕಾಗುವದಿಲ್ಲ ಮತ್ತು ವಾರ್ಷಿಕ 10 ರಿಂದ 15 ಸಾವಿರ ಟನ್ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ದೇಶದ ಆಂತರಿಕ ಬಳಕೆ ಅಮೇರಿಕಾದ ಆಂತರಿಕ ಬಳಕೆಗೆಯಷ್ಟೇ ಇದೆ.
ಆಮದು ವೆಚ್ಚ ಮತ್ತು ದರ
ವಿಯಟ್ನಾಂನ ಕಾಳುಮೆಣಸಿಗೆ 250 ರೂಪಾಯಿ ಯಿಂದ 300 ರೂಪಾಯಿ ಆಗಿದ್ದರೂ ದೇಶಕ್ಕೆ ಆಮದು ಮಾಡಿಕೊಳ್ಳುವದಾದರೆ ಲ್ಯಾಂಡಿಂಗ್ ದರದ ಶೇ. 68 ರಷ್ಟು ತೆರಿಗೆ ಕಟ್ಟಬೇಕಿದೆ. ಇದರಲ್ಲಿ ಮೂಲ ತೆರಿಗೆ ಶೇ. 65 , ಶಿಕ್ಷಣ ಸೆಸ್ ಶೇ. 2 ಮತ್ತು ಹೆಚ್ಚುವರಿ ಸೆಸ್ ಶೇ. 4 ರಷ್ಟನ್ನು ವಿಧಿಸಲಾಗುತ್ತದೆ. ಇದೆಲ್ಲಾ ಸೇರಿದರೆ 250 ರೂಪಾಯಿ ಮೂಲ ಬೆಲೆಯ ಕಾಳು ಮೆಣಸಿನ ಮೇಲೆ ಕೆಜಿಯೊಂದಕ್ಕೆ ಸುಮಾರು 165 ರೂ ಹೆಚ್ಚಲಿದ್ದು ಒಟ್ಟು ಬೆಲೆ ಆಮದುದಾರನಿಗೆ ಕೆಜಿಯೊಂದಕ್ಕೆ 412 ರೂಪಾಯಿಗಳಾಗಲಿದೆ. ಪ್ರಸ್ತುತ ದೇಶದಲ್ಲಿ ಈಗ ಇರುವ ದರಕ್ಕೆ ಹೋಲಿಸಿದರೆ ಆಮದು ಮಾಡಿಕೊಂಡರೆ ಲಾಭವೇನೂ ಆಗುವದಿಲ್ಲ.
ಶ್ರೀಲಂಕಾ ಮೂಲಕ ಆಮದು
ಆದರೆ, ನೆರೆಯ ಶ್ರೀಲಂಕಾ ದೇಶವು ಸಾರ್ಕ್ ರಾಷ್ಟ್ರಗಳಲ್ಲೊಂದಾಗಿದ್ದು, ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಿಂದ ಆಮದಾಗುವ ಆಹಾರ ಪದಾರ್ಥಗಳಿಗೆ ಶೇ. 8 ರಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ಇದೇ ಆಮದುದಾರರಿಗೆ ವರದಾನವಾಗಿದ್ದು ದೇಶದೊಳಗೆ ಬರುವ ಬಹುತೇಕ ಆಹಾರ ಪದಾರ್ಥಗಳು ಶ್ರೀಲಂಕಾದಿಂದ ಬಂದಂತೆ ದಾಖಲೆ ಸೃಷ್ಟಿಸಲಾಗುತ್ತಿದೆ. ಶ್ರೀಲಂಕಾದ ಸರ್ಕಾರಿ ಮೂಲಗಳ ಪ್ರಕಾರವೇ ಶ್ರೀಲಂಕಾ ಈವರೆಗೂ ವಿಯಟ್ನಾಂನಿಂದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳಲೇ ಇಲ್ಲ. ಆದರೆ ಇಲ್ಲಿನ ಆಮದುದಾರರು ಅಲ್ಲಿನ ಆಮದು -ರಫ್ತು ವರ್ತಕರ ಮೂಲಕ ಶ್ರೀಲಂಕಾದಿಂದ ಆಮದಾದದ್ದೆಂದು ಸುಲಭವಾಗಿ ಅನುಮತಿ ಪಡೆಯುತಿದ್ದಾರೆ ಎನ್ನಲಾಗಿದೆ.
ಆಮದಿಗೆ ವಿವಿಧ ಅನುಮತಿ
ದೇಶದಲ್ಲಿ ಯಾವದೇ ಆಹಾರ ಪದಾರ್ಥವನ್ನು ಆಮದು ಮಾಡಿಕೊಳ್ಳುವ ಕಂಪೆನಿ ಅಥವಾ ವ್ಯಕ್ತಿಗಳು ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಅವರಿಂದ ಇಂಪೋರ್ಟರ್ ಎಕ್ಸ್ಪೋರ್ಟರ್ ಕೋಡ್ ಅನ್ನು ಪಡೆದುಕೊಳ್ಳಬೇಕು. 10 ಅಂಕಿಗಳ ಈ ಕೋಡ್ ಶುಲ್ಕ 500 ರೂಪಾಯಿಗಳಾಗಿದ್ದು ಇದು ಪಾನ್ ಕಾರ್ಡ್ನಂತೆಯೇ ಜೀವಿತಾವಧಿಯ ಮಾನ್ಯತೆ ಹೊಂದಿರುತ್ತದೆ. ನಂತರ ಫುಡ್ ಅಂಡ್ ಸೇಫ್ಟಿ ಸ್ಟಾಂಡಡ್ರ್ಸ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಮತ್ತು ಕೇಂದ್ರ ಕೃಷಿ ಇಲಾಖೆಯಿಂದ ಆಮದು ಅನುಮತಿ ಪಡೆದುಕೊಳ್ಳಬೇಕು. ಆಮದುದಾರರು ನೀಡಿರುವ ಸ್ಯಾಂಪಲ್ ಗಳನ್ನು ಸೇಫ್ಟಿ ಸ್ಟಾಂಡಡ್ರ್ಸ್ನಲ್ಲಿ ಪರೀಕ್ಷೆಗೊಳಪಡಿಸಿದ ನಂತರವೇ ಆಮದು ಅನುಮತಿ ನೀಡಲಾಗುತ್ತದೆ. ವಿಯಟ್ನಾಂನಿಂದ ಬರುವ ಕಾಳು ಮೆಣಸಿನ ಹಡಗು ಶ್ರೀಲಂಕಾಗೆ ಹೋಗುತ್ತದಾದರೂ ಭಾರತಕ್ಕೆ ಆಮದಾಗುವ ಮೆಣಸು ಅಲ್ಲಿ ಇಳಿಸಲ್ಪಡುವದಿಲ್ಲ. ಆಮದುದಾರರು ಶ್ರೀಲಂಕಾದ ರಫ್ತು ಅನುಮತಿ ಮತ್ತು ಖೊಟ್ಟಿ ಬಿಲ್ನೊಂದಿಗೆ ದೇಶದೊಳಗೆ ತರುತಿದ್ದಾರೆ ಎನ್ನಲಾಗಿದೆ.
ಕಡಿವಾಣ ಹೇಗೆ...?
ಈ ರೀತಿ ನಕಲಿ ಬಿಲ್ ಹಾಗೂ ಶ್ರೀಲಂಕಾದ ಆಹಾರ ಇಲಾಖೆಯ ನಕಲಿ ಸರ್ಟಿಫಿಕೇಟ್ನೊಂದಿಗೆ ಬರುವ ಕಾಳು ಮೆಣಸನ್ನು ಡೈರೋಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ (ಡಿಅರ್ಐ) ಮತ್ತು ಕೇಂದ್ರೀಯ ಅಬಕಾರಿ ಹಾಗೂ ಕಸ್ಟಂಸ್ ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ನಡೆಸುವ ಅಧಿಕಾರ ಹೊಂದಿದ್ದಾರೆ. ಕಳೆದ ವಾರವಷ್ಟೇ ಡಿಆರ್ಐ ಅಧಿಕಾರಿಗಳು ಅಹ್ಮದಾಬಾದ್ನಲ್ಲಿ ತೆರಿಗೆ ವಂಚಿಸಿ ಶ್ರೀಲಂಕಾದಿಂದ ಬಂದ 12 ಕೋಟಿ ರೂಪಾಯಿ ಮೌಲ್ಯದ ಕರಿಮೆಣಸು ಮತ್ತು ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಪತ್ತೆಯಾದ ಕರಿಮೆಣಸು
ಇತ್ತೀಚೆಗೆ ಗೋಣಿಕೊಪ್ಪದಲ್ಲಿ ಪತ್ತೆಯಾದ ಕರಿಮೆಣಸಿನ ಕುರಿತು ಬೆಳೆಗಾರ ಸಂಘಟನೆಗಳು ಏಸಿಬಿ ಮತ್ತು ಸಿಐಡಿ ತನಿಖೆಗೆ ಒತ್ತಾಯಿಸಿವೆಯಾದರೂ ಇದರಿಂದ ಹೆಚ್ಚಿನ ಪ್ರಯೋಜನ ಆಗುವದಿಲ್ಲ. ಏಕೆಂದರೆ ಗೋಣಿಕೊಪ್ಪ ಪೋಲೀಸರು ದಾಖಲಿಸಿರುವ ಮೊಕದ್ದಮೆ ಸಂಖ್ಯೆ 137/2017 ರ ಪ್ರಕಾರ ವಂಚನೆ ಮತ್ತು ಆಹಾರ ಕಲಬೆರಕೆ ಆರೋಪಕ್ಕೆ ಶಿಕ್ಷೆ ಪ್ರಮಾಣ ಕಡಿಮೆಯೇ ಇದೆ. ಜಿಲ್ಲಾ ಪೋಲೀಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ಅವರ ಪ್ರಕಾರ ವಿಯಟ್ನಾಂ ಮೆಣಸನ್ನು ಕೊಡಗಿನ ಮೆಣಸು ಎಂದು ಮಾರಾಟ ಮಾಡಿದಾಗ, ಖರೀದಿ ಮಾಡಿ ಮೋಸ ಹೋದವರು ಪೋಲೀಸರಿಗೆ ದೂರು ನೀಡಬೇಕಿದೆ ಆದರೆ ಈವರೆಗೂ ಯಾವ ಖರೀದಿದಾರರೂ ದೂರು ದಾಖಲಿಸಿಲ್ಲ. ಮೈಸೂರಿನ ಆಹಾರ ಸಂಶೋಧನಾಲಯಕ್ಕೆ ಕಳಿಸಿರುವ ಕಾಳು ಮೆಣಸಿನ ಪುಡಿಯ ಪರೀಕ್ಷಾ ವರದಿ ಒಂದು ವಾರದಲ್ಲಿ ಪೋಲೀಸರ ಕೈ ಸೇರಲಿದ್ದು, ಬುಧವಾರ ಇನ್ನೊಂದು ಸ್ಯಾಂಪಲ್ ಅನ್ನು ಸಂಬಾರ ಮಂಡಳಿಯ ಕೊಚ್ಚಿನ್ನ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಎಪಿಎಂಸಿ ಪಾತ್ರ ನಗಣ್ಯ
ಈಗ ಪತ್ತೆಯಾಗಿರುವ ಕಾಳು ಮೆಣಸಿನ ಪ್ರಕರಣದಲ್ಲಿ ಗೋಣಿಕೊಪ್ಪ ಎಪಿಎಂಸಿಯ ಪಾತ್ರ ಅತ್ಯಲ್ಪ. ಏಕೆಂದರೆ ಆಮದು ರಫ್ತು ವಹಿವಾಟು ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಪಿಎಂಸಿ ಅಧಿಕಾರಿಗಳು ಕಾನೂನು ಬದ್ಧ ಸೆಸ್ ಮಾತ್ರ ಸಂಗ್ರಹಿಸಿದ್ದಾರೆ. ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದರೂ ಭ್ರಷ್ಟಾಚಾರ ಪ್ರಕರಣಕ್ಕೆ ಮಾತ್ರ ಶಿಕ್ಷೆ ಆಗಲಿದೆ. ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿ ದೇಶದೊಳಗೆ ತಂದಿದ್ದೆಂದು ಆರೋಪಿಸಲಾಗಿರುವ ಕಾಳು ಮೆಣಸು ವರ್ತಕರಿಂದ ತೆರಿಗೆ ಮತ್ತು ದಂಡ ವಸೂಲಿ ಮಾಡಲು ಕೇಂದ್ರ ಅಬಕಾರಿ ಮತ್ತು ಕಸ್ಟಂಸ್ ಇಲಾಖೆ , ಕೇಂದ್ರೀಯ ಕಂದಾಯ ಗುಪ್ತಚರ ಇಲಾಖೆ ಅಮೂಲಾಗ್ರ ತನಿಖೆ ಕೈಗೆತ್ತಿಕೊಂಡು ಆಮದಿಗೆ ನೀಡಿರುವ ದಾಖಲೆ ಪತ್ರಗಳನ್ನು ಪರಿಶೀಲಿಸಬೇಕಾಗಿದೆ. ಈ ಕುರಿತು ಬೆಳೆಗಾರ ಸಂಘಟನೆಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ.
- ಕೋವರ್ಕೊಲ್ಲಿ ಇಂದ್ರೇಶ್
(ಲೇಖಕರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರರಾಗಿದ್ದಾರೆ)