ಕುಶಾಲನಗರ, ಅ. 14: ಸಮಾಜದಲ್ಲಿ ಎಲ್ಲಾ ವರ್ಗದವರು ಸಾಮರಸ್ಯದಿಂದ ಜೀವನ ನಡೆಸುವ ಮೂಲಕ ಸಾಮಾಜಿಕ ಪರಿವರ್ತನೆ ಉಂಟಾಗಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಸರಕಾರ ಸಮಾಜ ಕಲ್ಯಾಣ ಇಲಾಖೆ, ಚಿಕ್ಕ ಅಳುವಾರ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಂತರ್ರಾಷ್ಟ್ರೀಯ ಸಮ್ಮೇಳನ ಆಯೋಜನಾ ಸಮಿತಿ ಆಶ್ರಯದಲ್ಲಿ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಾಮಾಜಿಕ ಪರಿವರ್ತನೆ: ಅಂಬೇಡ್ಕರ್‍ರವರ ಆಶಯಗಳ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆ ದೇಶದ ಸಂವಿಧಾನವಾಗಿ ಲಭಿಸಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಅಡಿಪಾಯದಡಿ ದೇಶದ ವ್ಯವಸ್ಥೆ ಮುನ್ನಡೆಯುತ್ತಿದ್ದು, ಈ ಮೂಲಕ ಅನೀತಿ, ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ಅಧಿಕಾರ ಹೊಂದುವ ಮೂಲಕ ಜನತೆಗೆ ನ್ಯಾಯ ಒದಗಿಸುವಲ್ಲಿ ಸಫಲವಾಗಿದೆ ಎಂದರು.

ಯಾವದೇ ದೇಶ ಪ್ರಗತಿ ಹೊಂದಬೇಕಾದಲ್ಲಿ ಶಿಕ್ಷಣ, ಸಾರಿಗೆ, ವಿದ್ಯುತ್ ಇನ್ನಿತರ ಮೂಲಭೂತ ವ್ಯವಸ್ಥೆಗಳು ಸಮರ್ಪಕವಾಗಿ ಲಭ್ಯವಾಗಬೇಕಿದೆ. ಇದರೊಂದಿಗೆ ಹೊಸ ಚಿಂತನೆಗಳು, ಆವಿಷ್ಕಾರಗಳು ದೇಶದ ಪ್ರಗತಿಯ ಸಂಕೇತವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯಕ್ರಮ ಸಂಯೋಜಕ ಡಾ. ಆರ್.ವಿ. ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಅವರನ್ನು ಯಾವದೋ ಒಂದು ವರ್ಗಕ್ಕೆ ಮಾತ್ರ ಸೀಮಿತಗೊಳಿಸುವ ಮನೋಭಾವನೆ ಮರೆಯಾಗಬೇಕಿದೆ. ದೇಶದ ಒಟ್ಟು ವ್ಯವಸ್ಥೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹಾನ್ ಸಾಧಕನ ಬಗ್ಗೆ ಇಂದಿಗೂ ಕೂಡ ತಾತ್ಸಾರ ಮನೋಭಾವ ಕಂಡು ಬರುತ್ತಿರುವದು ವಿಷಾದಕರ ಸಂಗತಿಯಾಗಿದೆ ಎಂದರು.

ಅರ್ಥಶಾಸ್ತ್ರ, ರಾಜ್ಯಶಾಸ್ತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಅಂಬೇಡ್ಕರ್ ಅವರ ಸಾಧನೆ ಬಗ್ಗೆ ಎಲ್ಲೂ ಕೂಡ ಉಲ್ಲೇಖ ಕಂಡು ಬರದಿರುವದು ದುರದೃಷ್ಟಕರ. ತಮ್ಮದೆ ಚಿಂತನೆಯೊಂದಿಗೆ ಸಾಮಾಜಿಕ ಸುಸ್ಥಿರತೆಗೆ ಹಲವು ಸುಧಾರಣೆ ಕ್ರಮಗಳನ್ನು ಕೈಗೊಂಡ ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವದು ಅತ್ಯವಶ್ಯಕ ಎಂದರು.

ಭ್ರಷ್ಟ ರಾಜಕೀಯ ವ್ಯವಸ್ಥೆ ಯಿಂದಾಗಿ ಜಾತಿ, ಧರ್ಮಗಳ ನಡುವೆ ಅಂತರ ಮತ್ತಷ್ಟು ಹೆಚ್ಚುತ್ತಿದೆ. ಶ್ರೇಷ್ಠ-ಕನಿಷ್ಟ ಎಂಬ ಪದ್ಧತಿಗಳು ಆಚರಣೆಯಲ್ಲಿರುವ ತನಕ ಸಾಮಾಜಿಕ ಪರಿವರ್ತನೆ ಅಸಾಧ್ಯ ಎಂದು ಅವರು ಹೇಳಿದರು.

ನಿವೃತ್ತ ಐಎಫ್‍ಎಸ್ ಅಧಿಕಾರಿ ಸಿದ್ದಪ್ಪ ಮಾತನಾಡಿ, ಪ್ರತಿಯೊಬ್ಬರೂ ಕೂಡ ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕಿದೆ. ಕೇವಲ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಮಾತ್ರ ಮಗ್ನರಾಗದೆ ತಮಗಿರುವ ಕರ್ತವ್ಯಗಳನ್ನು ನಿರ್ವಹಿಸಲು ಮುಂದಾದಲ್ಲಿ ಸಾಮಾಜಿಕ ಪರಿವರ್ತನೆ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಮಾತನಾಡಿದರು.

ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಬಿ.ಎಸ್. ಶ್ರೀನಾಥ್, ಹೆಚ್.ಎಸ್. ವೆಂಕಟೇಶ್ ಇದ್ದರು.

ಪೂಜಾ ಮತ್ತು ತಂಡ ಪ್ರಾರ್ಥಿಸಿದರೆ, ಜಮೀರ್ ಅಹಮ್ಮದ್ ನಿರೂಪಿಸಿದರು, ಡಾ.ಕೆ.ಎಸ್. ಚಂದ್ರಶೇಖರಯ್ಯ ಸ್ವಾಗತಿಸಿದರು, ಡಾ.ಟಿ.ಕೇಶವಮೂರ್ತಿ ವಂದಿಸಿದರು.

ಕಾರ್ಯಕ್ರಮ ಅಂಗವಾಗಿ ನಡೆದ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ. ಪ್ರದೀಪ್ ರಮಾವತ್ ‘ಶಿಕ್ಷಣ, ಪ್ರಭುತ್ವ ಮತ್ತು ಸಮಾಜವಾದ’ ವಿಷಯದ ಕುರಿತು ವಿಚಾರ ಮಂಡಿಸಿದರು.