ವೀರಾಜಪೇಟೆ, ಅ. 14: ಕೊಡಗು ಜಿಲ್ಲೆಗೆ ವಿಯೆಟ್ನಾಂನ ಕರಿಮೆಣಸು ಆಮದು ಮಾಡಿದ್ದರಿಂದ ಕೊಡಗಿನ ಬೆಳೆಗಾರರಿಗೆ ಮಾರಕವಾದ ಹಿನ್ನೆಲೆ ಹಾಗೂ ಕರಿಮೆಣಸಿನ ಬೆಲೆ ಕುಸಿತ ಗೊಂಡು ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿರುವದರಿಂದ ಗೋಣಿಕೊಪ್ಪ ಆರ್‍ಎಂಸಿ ಆಡಳಿತದ ವಿರುದ್ಧ ಈ ತಿಂಗಳ ಕೊನೆ ವಾರದಲ್ಲಿ ಕೊಡಗು ಸೇರಿದಂತೆ ರಾಜ್ಯದ ಕರಿಮೆಣಸು ಬೆಳೆಯುವ ಜಿಲ್ಲೆಯನ್ನೊಳ ಗೊಂಡಂತೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ತಿಳಿಸಿದರು.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರುಣ್ ಮಾಚಯ್ಯ ಗೋಣಿಕೊಪ್ಪ ಎಪಿಎಂಸಿ ಕಳಪೆ ಗುಣಮಟ್ಟದ ಕರಿಮೆಣಸು ದಂಧೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ರೂ. 40 ಕೋಟಿಗೂ ಅಧಿಕ ತೆರಿಗೆ ವಂಚನೆಯಾಗಿದೆ. ಕೇಂದ್ರದ ಅಧಿಕಾರಿಗಳು ಫೋರ್ಜರಿ ದೃಢೀಕರಣ ಪತ್ರವನ್ನು ಸೂಕ್ತವಾಗಿ ಪರಿಶೀಲಿಸದಿರುವದರಿಂದ ಅಕ್ರಮ ಕರಿ ಮೆಣಸು ಗೋಣಿಕೊಪ್ಪವನ್ನು ತಲುಪಿದೆ.

ಆರ್.ಎಂ.ಸಿ. ಆಡಳಿತ ಸುಮಾರು 200ಟನ್‍ಗಳಷ್ಟು ಕರಿಮೆಣಸನ್ನು ವಿಯಟ್ನಾಂನಿಂದ ಆಮದು ಮಾಡಿದೆ. ಇದಕ್ಕೆ ಗೋಣಿಕೊಪ್ಪದಲ್ಲಿ ಕಲಬೆರಕೆಯೂ ನಡೆದಿದೆ. ಕರಿ ಮೆಣಸು ಚೀಲದ ಮೇಲೆ ವಿಯೆಟ್ನಾಂ ಮೊಹರಿನ ನಂತರ ಭಾರತದ ಫುಡ್ ಸೆಫ್ಟ್ಟಿ ಇಲಾಖೆಯ ಮೊಹರಿದೆ. ಈ ಮೊಹರಿನ ಮೊದಲು ಕರಿ ಮೆಣಸು ಬೆಳೆಗೆ ಸಂಬಂಧಿಸಿದಂತೆ ವಿಯೆಟ್ನಾಂ ದೇಶದ ವಿವಿಧ ಇಲಾಖೆಗಳಿಂದ ಐದು ಪ್ರಮಾಣ ಪತ್ರವನ್ನು ಸೆಫ್ಟಿ ಇಲಾಖೆಗೆ ಸಲ್ಲಿಸಬೇಕಾಗಿದ್ದರೂ ಇದನ್ನು ಉಲ್ಲಂಘಿಸಲಾಗಿದೆ. ಉದ್ಯಮಿಗಳಾದ ಜತಿನ್ ಶಾ, ಸೌರವ್ ಬಂಕ್ ಆಮದು ಮಾಡಿದ್ದಾರೆ. ಈ ಹಗರಣದಲ್ಲಿ ಅಂತರ್ರಾಷ್ಟ್ರೀಯ ಉದ್ಯಮಿಗಳು, ಬಿಜೆಪಿ ಪ್ರಮುಖರು ಶಾಮಿಲಾಗಿದ್ದಾರೆ. ವಿಯೆಟ್ನಾಂ ಕರಿ ಮೆಣಸು ಹಗರಣದಲ್ಲಿ ಶಾಮಿಲಾಗಿರುವ ಗೋಣಿಕೊಪ್ಪಲಿನ ಆರ್.ಎಂ.ಸಿ. ಆಡಳಿತ ಸೇರಿದಂತೆ ಎಲ್ಲರನ್ನು ಫೇರಾ ಕಾಯಿದೆಯಡಿ ಬಂಧಿಸಬೇಕು ಪಕ್ಷದ ಮೂರು ಮಂದಿ ನಾಮಕರಣ ಸದಸ್ಯರುಗಳು ಆರ್.ಎಂ.ಸಿ. ಆಡಳಿತದ ಯಾವದೇ ಆಮಿಷಕ್ಕೊಳಗಾಗದೆ ಕರಿ ಮೆಣಸು ಹಗರಣವನ್ನು ಬಯಲು ಮಾಡಿ ಬೆಳೆಗಾರರ ಹಿತವನ್ನು ಕಾಪಾಡಿದ್ದಾರೆ ಎಂದು ಅರುಣ್ ಮಾಚಯ್ಯ ಹೇಳಿದರು. ಬೆಂಗಳೂರಿ ನಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಕೊಡಗಿನü ಬೆಳೆಗಾರರು, ರೈತರು, ಚೇಂಬರ್ ಆಫ್ ಕಾಮರ್ಸ್, ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಅರುಣ್ ಮಾಚಯ್ಯ ತಿಳಿಸಿದರು.

ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ ವಿಯೆಟ್ನಾಂನ ಕರಿಮೆಣಸು ಹಗರಣ ಹಗಲು ದರೋಡೆಯಾಗಿದೆ. ಈಚೆಗೆ ನಡೆದ ಜಿ.ಪಂ. ಸಭೆಯಲ್ಲಿ ಕರಿಮೆಣಸು ಹಗರಣದ ವಿರುದ್ಧ ನಿರ್ಣಯ ಅಂಗೀಕರಿಸದ್ದರಿಂದ ಪಕ್ಷದ ಸದಸ್ಯರು ಸಭಾತ್ಯಾಗ ಮಾಡ ಬೇಕಾಯಿತು. ಜಿ.ಪಂ. ಸದಸ್ಯರು ಕೆಲವರು ಈ ಪ್ರಕರಣದಲ್ಲಿ ಶಾಮಿಲಾಗಿರುವದರಿಂದ ನಿರ್ಣಯವನ್ನು ಬೆಂಬಲಿಸಲಿಲ್ಲ ಎಂದು ದೂರಿದರು. ಗೋಷ್ಠಿಯಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ. ಉಪಾಧ್ಯಕ್ಷ ಪಿ.ಎ. ಹನೀಫ್, ಅಲ್ಪ ಸಂಖ್ಯಾತರ ಘಟಕದ ರಾಜ್ಯ ಸಮಿತಿ ಉಪಾಧ್ಯಕ್ಷ ಹಸೈನಾರ್ ಜಿ.ಜಿ. ಮೋಹನ್, ಎಂ.ಎಸ್. ಪೂವಯ್ಯ, ಐ.ಎನ್.ಟಿ. ಯು.ಸಿ.ಯ ನಾಪಂಡ ಮುತ್ತಪ್ಪ, ಕೆ. ಸತೀಶ್, ಆರ್.ಎಂ.ಸಿ. ಸದಸ್ಯ ಎಂ.ಕೆ. ಬೋಪಣ್ಣ ಮತ್ತಿತರರು ಉಪಸ್ಥಿತರಿದ್ದರು.