ಭಾಗಮಂಡಲ, ಅ. 14: ಕಳೆದ ಸೆ. 26ರಂದು ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ ಆರಂಭಗೊಂಡಿರುವ ವಾರ್ಷಿಕ ತುಲಾ ಸಂಕ್ರಮಣ ಕಾವೇರಿ ಜಾತ್ರೆಗೆ ಶ್ರೀ ತಲಕಾವೇರಿ - ಭಾಗಮಂಡಲ ದೇವಾಲಯ ಹಾಗೂ ಜಿಲ್ಲಾ ಆಡಳಿತದಿಂದ ಭರದ ಸಿದ್ಧತೆ ನಡೆಯುತ್ತಿದೆ. ತಾ. 4ರಂದು ಆಜ್ಞಾ ಮುಹೂರ್ತದೊಂದಿಗೆ, ಇಂದು ಬೆಳಿಗ್ಗೆ 11.55ಕ್ಕೆ ಧನುರ್ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವ ಮೂಲಕ ನಂದಾದೀಪ ಬೆಳಗಲಾಯಿತು. ಸಂಜೆ 4.25ಕ್ಕೆ ಕುಂಭ ಲಗ್ನದಲ್ಲಿ ಭಂಡಾರ (ಕಾಣಿಕೆ q Àಬ್ಬ) ಇರಿಸಲಾಯಿತು. ಈ ಸಂದರ್ಭ ಅಧಿಕಾರಿ ಜಗದೀಶ್ ಕುಮಾರ್, ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಪಾರುಪತ್ತೆಗಾರ ಪೊನ್ನಣ್ಣ ಹಾಗೂ ರವೀಂದ್ರ ಹೆಬ್ಬಾರ್, ಭರತ್ ಮೊದಲಾದವರು ಉಪಸ್ಥಿತರಿದ್ದರು.ತಾ. 17ರಂದು ಮಧ್ಯಾಹ್ನ 12.33 ಗಂಟೆಗೆ ಧನುರ್ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತೀಥೋದ್ಭವ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ದೇವಾಲಯ ಆಡಳಿತವು ಸಕಲ ಸಿದ್ಧತೆಯಲ್ಲಿ ತೊಡಗಿರುವದು ಕಂಡು ಬಂತು. ಈ ಸಲುವಾಗಿ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮೊದಲಾದವರು ಖುದ್ದು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಭಾಗಮಂಡಲ, ತಲಕಾವೇರಿ ತನಕ ಲೋಕೋಪಯೋಗಿ, ಅರಣ್ಯ ಹಾಗೂ ಚೆಸ್ಕಾಂ ಇಲಾಖೆಗಳಿಂದ ರಸ್ತೆಯುದ್ದಕ್ಕೂ ಗುಂಡಿ ಮುಚ್ಚುವದು, ಅಲ್ಲಲ್ಲಿ ಸುಣ್ಣ
(ಮೊದಲ ಪುಟದಿಂದ) ಬಳಿಯುವದು, ಅಪಾಯಕಾರಿ ಮರಗಳ ತೆರವುಗೊಳಿಸುವದು ಸೇರಿದಂತೆ ರಸ್ತೆ ಇಕ್ಕಡೆಗಳಲ್ಲಿ ಗಿಡಗಂಟೆಗಳನ್ನು ಕಡಿಯುತ್ತಿದ್ದ ದೃಶ್ಯ ಎದುರಾಯಿತು.
ಸಾಮೂಹಿಕ ಸ್ವಚ್ಛತೆ : ಇನ್ನೊಂದೆಡೆ ಇಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗ್ರೀನ್ಸಿಟಿ ಫೋರಂ ಹಾಗೂ ಕೊಡಗು ವಿದ್ಯಾಲಯ ಮಕ್ಕಳು ತಲಕಾವೇರಿಯಿಂದ ಭಾಗಮಂಡಲ ತನಕ ಸಾಮೂಹಿಕ ಸ್ವಚ್ಛತೆ ಕೈಗೊಂಡಿದ್ದರು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ಸಹಿತ ವಿವಿಧ ಪ್ರಮುಖರು ಮಾರ್ಗ ಸ್ವಚ್ಛಗೊಳಿಸುವಲ್ಲಿ ಪೊರಕೆ ಹಿಡಿದು ಶ್ರಮದಾನ ಮಾಡಿದರು. ನೂರೈವತ್ತಕ್ಕೂ ಅಧಿಕ ಪೊಲೀಸರು, ಒಂದುನೂರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಈ ಬಾರಿ ತೀಥೋದ್ಭವ ವೇಳೆ ಶ್ರೀ ಕಾವೇರಿ ಮಾತೆಗೆ ಪೂಜಾದಿ ಕೈಂಕರ್ಯವನ್ನು ಕ್ಷೇತ್ರದ ಅರ್ಚಕ ಕುಟುಂಬದ ರಾಮಕೃಷ್ಣಾಚಾರ್ ನೇತೃತ್ವದಲ್ಲಿ ನಡೆಸಲು ತಯಾರಿಯೊಂದಿಗೆ ದೇವಾಲಯ ಆಡಳಿತ ಪೂಜಾ ಕೈಂಕರ್ಯಗಳ ಸಿದ್ಧತೆಯಲ್ಲಿ ತೊಡಗಿದೆ.
ತಲಕಾವೇರಿಯಲ್ಲಿ ಸುಸಜ್ಜಿತ ಶಾಮಿಯಾನದ (ಪೆಂಡಾಲ್) ನಿರ್ಮಾಣ, ಭಕ್ತರ ನೂಕುನುಗ್ಗಲು ತಪ್ಪಿಸಲು ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ಗಳ ಅಳವಡಿಕೆ, ಕೊಡಗು ಏಕೀಕರಣದಿಂದ ಅನ್ನದಾನಕ್ಕೆ ಸಿದ್ಧತಾ ಕ್ರಮಗಳೊಂದಿಗೆ ಅನ್ನಛತ್ರ ಇತ್ಯಾದಿ ಕಡೆಗಳಲ್ಲಿ ಆಡಳಿತವು ಸುಣ್ಣ, ಬಣ್ಣ ಬಳಿದು ಸ್ವಚ್ಛತೆ ಕೈಗೊಂಡಿರುವದು ಗೋಚರಿಸಿತು.
ತಾ. 16ರಿಂದ ಅನ್ನಸಂತರ್ಪಣೆ ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಕೊಡಗು ಏಕೀಕರಣ ರಂಗದ ಆಶ್ರಯದಲ್ಲಿ ತಾ. 16ರ ಮಧ್ಯಾಹ್ನದಿಂದ ಆರಂಭಗೊಂಡು ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.
ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ದಾಸೋಹ ನಡೆಯಲಿದೆ. ಒಂದು ತಿಂಗಳ ಕಾಲ ನಡೆಯುವ ಅನ್ನದಾನದಲ್ಲಿ ಮೂರು ಹೊತ್ತು ಕೂಡ ಬಗೆ ಬಗೆಯ ಆಹಾರ ಪದಾರ್ಥಗಳನ್ನು ಭಕ್ತಾದಿಗಳಿಗೆ ಬಡಿಸಲಾಗುತ್ತದೆ. ಸುಮಾರು 20 ಮಂದಿ ಅಡುಗೆ ಭಟ್ಟರ ತಂಡ ಆಹಾರ ಪದಾರ್ಥ ತಯಾರಿಯಲ್ಲಿ ತೊಡಗಿಸಿಕೊಳ್ಳಲಿದ್ದು, ಏಕೀಕರಣ ರಂಗದ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಅನ್ನಸಂತರ್ಪಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸುಮಾರು ರೂ. 18 ಲಕ್ಷ ವೆಚ್ಚದಲ್ಲಿ ಅನ್ನದಾನ ನಡೆಯಲಿದ್ದು, ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲ ಭಕ್ತಾದಿಗಳಿಗೂ ಸ್ವಯಂ ಸೇವಕರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಏಕೀಕರಣ ರಂಗದ ಪ್ರಮುಖ ತಮ್ಮು ಪೂವಯ್ಯ ಮಾಹಿತಿ ನೀಡಿದ್ದಾರೆ.
ಕೈಲಾಸ ಆಶ್ರಮದಲ್ಲಿ ವರ್ಷಂಪ್ರತಿಯಂತೆ ತಮಿಳುನಾಡು ಮೂಲದ ಅಳಗಪ್ಪ ಚೆಟ್ಟಿಯಾರ್ ಕುಟುಂಬದ ಅಣ್ಣಾಮಲೈ ಹಾಗೂ ಮುತ್ತಯ್ಯ ಚೆಟ್ಟಿಯಾರ್ ಅವರಿಂದ ಸುಮಾರು 8 ಸಾವಿರ ಭಕ್ತರಿಗೆ ಅನ್ನದಾನ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.
ಅಲ್ಲದೆ ದೇವಾಲಯದಿಂದ ಭಾಗಮಂಡಲದಲ್ಲಿ ಅನ್ನದಾನದೊಂದಿಗೆ, ಈ ಹಿಂದಿನಂತೆ ಬೇರೆ ಬೇರೆ ಸಂಘ ಸಂಸ್ಥೆಗಳು, ಮಂಡ್ಯ ಜಿಲ್ಲೆಯ ಸದ್ಭಕ್ತರು ಕೂಡ ಜಾತ್ರೆಯ ದಿನ ಅನ್ನದಾನ ಕೈಗೊಳ್ಳಲಿದ್ದು, ಈ ಬಗ್ಗೆ ಅಲ್ಲಲ್ಲಿ ತಯಾರಿ ಕಂಡು ಬಂದಿದೆ. ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಸಂಸ್ಥೆಯ ಭಕ್ತ ವತ್ಸಲ ಎಂಬವರ ನೇತೃತ್ವದಲ್ಲಿ ಮಂಡ್ಯ ಬಳಗ ಅನ್ನದಾನ ನಡೆಸಲಿದೆ.
ಈ ಎಲ್ಲ ಸಿದ್ಧತೆಗಳೊಂದಿಗೆ ಕ್ಷೇತ್ರಗಳಲ್ಲಿ ಅಲ್ಲಲ್ಲಿ ಬೆಳಕಿನ ವ್ಯವಸ್ಥೆ, ಅಲಂಕಾರ, ವಾಹನ ನಿಲುಗಡೆ, ಕೇಶ ಮುಂಡನ, ಪಿಂಡ ಪ್ರದಾನದೊಂದಿಗೆ ಪಿತೃಕಾರ್ಯಕ್ಕೂ ಅನುಕೂಲತೆ ಕಲ್ಪಿಸಲಾಗಿದೆ. ಸದ್ಭಕ್ತರಿಗೆ ವ್ಯವಸ್ಥೆ ರೂಪಿಸುವಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ಕಾರ್ಯನಿರ್ವಹಣಾಧಿಕಾರಿಗಳಾದ ಜಗದೀಶ್ಕುಮಾರ್, ಎಸ್.ಎಸ್. ಸಂಪತ್ ಕುಮಾರ್, ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಪಾರುಪತ್ತೆಗಾರ ಪೊನ್ನಣ್ಣ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಕೈಜೋಡಿಸಿರುವದು ಕಂಡುಬಂತು.